ಹಿರಿಯೂರು: ಭಾನುವಾರ ಸುರಿದ ಮಳೆಯಿಂದಾಗಿ ನಗರದಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದು, ಮಳೆಗೆ ಕೆಲವರು ಸೂರು ಕಳೆದುಕೊಂಡಿದ್ದು, ರೈತರ ದವಸ ಧಾನ್ಯ ಹಾಗೂ ಅಂಗಡಿಗಳ ಒಳಗಡೆ ಸಹ ಮಳೆ ನೀರು ನುಗ್ಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ಎಂದು ಇಲ್ಲಿನ ಸಾರ್ವಜನಿಕರು ತಿಳಿಸಿದ್ದಾರೆ.
ಹಿರಿಯೂರು ತಾಲ್ಲೂಕಿನಾದ್ಯಾಂತ ಭಾನುವಾರ ಮಧ್ಯರಾತ್ರಿ ಸುರಿದ ಮಳೆ ಜನರ ನಿದ್ರೆಗೆಡಿಸಿದೆ. ಮಳೆ ನೀರು ಆಯಕಟ್ಟಿನ ಪ್ರದೇಶಗಳಲ್ಲಿ ಮನೆ ಒಳಗೆ ನುಗ್ಗಿದ ಪರಿಣಾಮ ರಾತ್ರಿ ಪೂರ್ತಿ ನಿದ್ದೆ ಮಾಡದೆ ನೀರನ್ನು ಹೊರ ಹಾಕುವಂತಹ ಸನ್ನಿವೇಶ ಸೃಷ್ಟಿಯಾಗಿದೆ.
ಕೆಲವೆಡೆ ಎಲ್ಲಿ ಮನೆಗಳು ಬೀಳಲಿವೆ ಎಂಬ ಆತಂಕ ಜನರಲ್ಲಿ ಮನೆಮಾಡಿತ್ತು. ಅದೇ ರೀತಿ ನಗರದ ಕೆ.ಎಮ್.ಕೊಟ್ಟಿಗೆ, ನಂಜಯ್ಯನ ಕೊಟ್ಟಿಗೆಗಳಲ್ಲಿ ಹಾಗೂ ವಿವಿಧೆಡೆ ಚರಂಡಿ ಒಡೆದು ಮನೆಗಳ ಒಳಗಡೆ ನೀರು ನುಗ್ಗಿದೆ. ಮಳೆಯ ನೀರು ತಗ್ಗು ಪ್ರದೇಶಕ್ಕೆ ನುಗ್ಗಿದ್ದರಿಂದ ವಾಹನಗಳು ನೀರಿನಲ್ಲಿ ಮುಳುಗಿದ್ದು, ಸಿ.ಎಮ್.ಲೇಔಟ್ ನಲ್ಲಿರುವ ಅಂಗನವಾಡಿ ಕೇಂದ್ರ ನೀರಿನಲ್ಲಿ ಮುಳುಗಿದೆ.
ಘಟನೆ ಸಂಬಂಧ ನಮ್ಮತುಮಕೂರು ಜೊತೆಗೆ ಮಾತನಾಡಿದ ಸಾರ್ವಜನಿಕರು, ರಾತ್ರಿಯಿಡೀ ಮಳೆ ಬಂದು, ಮಳೆಯ ಕಲುಷಿತ ನೀರು ಮನೆಯ ಒಳಗಡೆ ನುಗ್ಗಿ ಹರಿಯುತ್ತಿರುವುದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಕಾಡುತ್ತಿದೆ ಎಂದರು. ಮನೆಯ ಒಳಗಡೆ ನುಗ್ಗಿದ ನೀರನ್ನು ಹೊರಹಾಕಲು ಮಧ್ಯರಾತ್ರಿಯಿಂದ ಬೆಳಕಿನವರೆಗೂ ಹರಸಾಹಸಪಟ್ಟಿದ್ದೇವೆ. ಕಲುಷಿತ ನೀರಿನ ಜೊತೆಗೆ ಹಾವುಗಳು, ಕಪ್ಪೆಗಳು, ಹುಳಗಳು ಕೂಡ ಮನೆಯೊಳಗೆ ನುಗ್ಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತೀ ವರ್ಷವೂ ಇಲ್ಲಿ ಇದೇ ಸಮಸ್ಯೆಯಾಗಿದ್ದು, ನಮಗೆ ಯಾರೊಬ್ಬರೂ ಸಹಾಯ ಮಾಡುವುದಿಲ್ಲ. ಇಲ್ಲಿ ರಾಜಕಾಲುವೆ ನಿರ್ಮಿಸದೆ ಇದ್ದಿದ್ದೆ ಇದಕ್ಕೆ ಮೂಲ ಕಾರಣವಾಗಿದೆ ಹಾಗೂ ನಿರ್ಮಿಸಿರುವ ರಾಜ ಕಾಲುವೆಯನ್ನು ಸಹ ಇವತ್ತಿನ ಭ್ರಷ್ಟ ಸರ್ಕಾರ ಹಣದ ಆಸೆಗಾಗಿ ರಾಜಕಾಲುವೆಗಳನ್ನು ಮುಚ್ವುವಂತಹ ಕೆಲಸಗಳು ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಇನ್ನು ಮುಂದೆ ಆದರೂ ಸರ್ಕಾರ ಇದರ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ. ಘಟನೆಯಿಂದ ನಷ್ಟಕ್ಕೊಳಗಾದವರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಹಿರಿಯೂರು ತಾಲ್ಲೂಕಿನ ಶಾಸಕರಾದ ಪೂರ್ಣಿಮಾ ಶ್ರೀನಿವಾಸ್ ಆಪ್ತಸಹಾಯಕ ನಿರಂಜನಮೂರ್ತಿ ಮಾತನಾಡಿ, ಉತ್ತರ ದಕ್ಷಿಣದ ಅಭಿಮುಖವಾಗಿ ಹರಿಯುತ್ತಿರುವ ನದಿಯಿಂದ ಈ ನೀರು ಬರುತ್ತಿದ್ದು, ಹರಿಶ್ಚಂದ್ರ ಘಾಟ್ , ಕೆ.ಎಮ್. ಕೊಟ್ಟಿಗೆಯಿಂದ ಹರಿದು ಬರುವಂತಹ ನೀರಿಗೆ ಸರಿಯಾದ ರೀತಿಯಲ್ಲಿ ಅಂದಿನ ನಗರಸಭೆ ಅಧ್ಯಕ್ಷರಾದ ಚಂದ್ರಶೇಖರ್ ಅವರು ಸರಿಯಾದ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಲು ಆಗಲಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ಈ ವಿಷಯವನ್ನು ಈಗಾಗಲೇ ಶಾಸಕರಿಗೆ ಹಾಗೂ ಸರ್ವೇ ಅಧಿಕಾರಿಗಳಿಗೂ ಸಹ ತಿಳಿಸಿದ್ದು, ಇಂದು ಸರ್ವೇ ಮಾಡಿ ಮುಂದಿನ ಕ್ರಮ ಶಾಸಕರು ಕೈಗೊಂಡು ಇದಕ್ಕೆ ಪರಿಹಾರ ನೀಡುವುದಾಗಿಯೂ ನಿರಂಜನ್ ಮೂರ್ತಿ ಅವರು ನಮ್ಮ ತುಮಕೂರು ಮಾಧ್ಯಮದ ಮೂಲಕ ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯೂರು ನಗರಸಭೆ ಪೌರಾಯುಕ್ತರಾದ ಡಿ.ಉಮೇಶ್, ಅಶೋಕ್, ಅಧ್ಯಕ್ಷರಾದ ಶಂಶುದ್ ಉನ್ನಿಸಾ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಅಜಯ್ ಕುಮಾರ್ ಯಾನೆ ಅಲಿಯಾಸ್ ಅಜ್ಜಪ್ಪ, ಹಿರಿಯೂರು ನಗರ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಶಿವಕುಮಾರ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಾದ ಮಾಯವರ್ಮ, ರಾಜು, ರಾಜಸ್ವ ನಿರೀಕ್ಷಕರಾದ ಸ್ವಾಮಿ, ಸುರೇಶ್ ನಾಯಕ, ತಿಮ್ಮೇಶ್ ಸೇರಿದಂತೆ ಈ ಸಂದರ್ಭದಲ್ಲಿ ಹಾಜರಿದ್ದರು.
ವರದಿ: ಮುರುಳಿಧರನ್ ಆರ್. ಹಿರಿಯೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


