ಬೆಂಗಳೂರು: ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಒಂದು ವರ್ಷ ತುಂಬಿದ ಸಂದರ್ಭದಲ್ಲಿ ಸಾಧನಾ ಸಮಾವೇಶ ಜನೋತ್ಸವವಾಗಿ ಆಚರಿಸಲು ತೀರ್ಮಾನಿಸಿದೆ. ಆದರೆ ಇದು ಜನೋತ್ಸವವಲ್ಲ, ‘ಭ್ರಷ್ಟೋತ್ಸವ‘ ಎಂದು ರಾಜ್ಯ ಕಾಂಗ್ರೆಸ್ ಘಟಕ ವ್ಯಂಗ್ಯ ಮಾಡಿದೆ.
ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಈ ಸರ್ಕಾರ ಜನರಿಗೆ ದ್ರೋಹ ಎಸಗಿದೆ. ಭ್ರಷ್ಟಾಚಾರ ಮುಗಿಲುಮುಟ್ಟಿದೆ‘ ಎಂದು ವಾಗ್ದಾಳಿ ನಡೆಸಿದರು.
‘ಬೊಮ್ಮಾಯಿ ಸರ್ಕಾರದ ಆಡಳಿತ ನೋಡಿ ಸಂಪೂರ್ಣ ಭ್ರಮನಿರಸನವಾಗಿದೆ. ಗುತ್ತಿಗೆದಾರರಿಗೆ ಶೇ.40ರಷ್ಟು ಲಂಚ ಕೊಡಬೇಕಾದ ಪರಿಸ್ಥಿತಿ ಬಂದಿರುವುದು ಇದೇ ಮೊದಲು. ಗುತ್ತಿಗೆದಾರ ಸಂತೋಷ್ ಪಾಟೀಲ ಈ ಲಂಚದ ಹಣ ನೀಡಲಾಗದೆ ಆತ್ಮಹತ್ಯೆ ಮಾಡಿಕೊಂಡರು. ಇದಕ್ಕೆ ಕಾರಣರಾದ ಮಂತ್ರಿ, ನಮ್ಮ ಹೋರಾಟಗಳಿಗೆ ಮಣಿದು ರಾಜೀನಾಮೆ ನೀಡಿದರೂ ಇದೀಗ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ‘ ಎಂದು ಸಿದ್ದರಾಮಯ್ಯ ಟೀಕಿಸಿದರು.
ರಾಜ್ಯ ಸರ್ಕಾರ ಕಾರ್ಯವೈಖರಿಯಿಂದಾಗಿ ಕೇಂದ್ರದಿಂದ ಅನ್ಯಾಯವಾಗಿದೆ ಎಂದು ಅಂಕಿಅಂಶಗಳ ಸಹಿತ ವಿವರಿಸಿದ ಅವರು, ‘ರಾಜ್ಯದಿಂದ ಆಯ್ಕೆಯಾದ 25 ಜನ ಸಂಸದರಿದ್ದಾರೆ. ಮುಖ್ಯಮಂತ್ರಿಗಳೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿ ಸದಸ್ಯರಿದ್ದಾರೆ. ಆದರೂ ಯಾರೊಬ್ಬರೂ ಈ ಅನ್ಯಾಯಗಳ ಬಗ್ಗೆ ಮಾತನಾಡಿಲ್ಲ. ಇದನ್ನೇ ಒಂದು ವರ್ಷದ ಸಂಭ್ರಮವೆಂದು ಆಚರಿಸುತ್ತೀರಾ?ಎಂದು ಪ್ರಶ್ನಿಸಿದರು.
‘ಇದೊಂದು ನಿಷ್ಕ್ರಿಯ ಸರ್ಕಾರ. ವಿಧಾನಸೌಧ ಇಂದು ವ್ಯಾಪಾರದ ಸೌಧ ಆಗಿದೆ. ಇವರು ‘ಭ್ರಷ್ಟೋತ್ಸವ‘ ಎಂದು ತಮ್ಮ ಸರ್ಕಾರದ ಸಾಧನೆಯನ್ನು ಆಚರಣೆ ಮಾಡಬೇಕು. ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದವರು ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ ಎಂದು ಹೇಳಲು ಯಾವ ನೈತಿಕ ಹಕ್ಕಿದೆ‘ ಎಂದರು.
ಡಿ.ಕೆ. ಶಿವಕುಮಾರ್ ಮಾತನಾಡಿ, ನಿಜಕ್ಕೂ ಸಾಧನೆ ಮಾಡಿದ್ದರೆ, ಪ್ರಧಾನಿ ಸೇರಿದಂತೆ ಎಲ್ಲರೂ ಕಾರ್ಯಕ್ರಮಕ್ಕೆ ಬಂದು ಸರ್ಕಾರದ ಬೆನ್ನು ತಟ್ಟುತ್ತಿದ್ದರು. ಭ್ರಷ್ಟಾಚಾರವೇ ಸಾಧನೆ‘ ಎಂದರು.
ಈ ಸರ್ಕಾರದಿಂದ ರೈತರಿಗೆ ಯಾವುದೇ ರೀತಿಯ ಅನುಕೂಲ ಆಗಿಲ್ಲ. ವಿವಿಧ ಇಲಾಖೆಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ತಾಂಡವವಾಡಿದೆ. ಭ್ರಷ್ಟಾಚಾರದ ವಿಚಾರವಾಗಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಪ್ರಧಾನಿಗೆ ದೂರು ನೀಡಿದರೂ ತನಿಖೆ ಮಾಡಲಿಲ್ಲಎಂದರು.
ವರದಿ: ಮುರುಳಿಧರನ್ ಆರ್, ಚಿತ್ರದುರ್ಗ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz