ಹೆಗ್ಗನೂರು: ಫೆ.17ರ ಸೋಮವಾರದಿಂದ ಫೆ.19ರ ಬುಧವಾರದವರೆಗೆ ಮೂರು ದಿನಗಳ ಕಾಲ ಕಂದೇಗಾಲ ಶ್ರೀ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಮತ್ತು ದನಗಳ ಪ್ರದರ್ಶನವನ್ನು ಅದ್ಧೂರಿಯಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಸೋಮವಾರದಿಂದ ಜಾತ್ರೆ ಆರಂಭಗೊಳ್ಳಲಿದೆ.
ಸರಗೂರು ತಾಲ್ಲೂಕಿನ ತಾಲ್ಲೂಕಿನ ಕಂದೇಗಾಲ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ 8 ಗಂಟೆಗೆ ಬಿಡುಗಲು– ಪಡುವಲು ಮಠದ ಮಹಾದೇವಸ್ವಾಮಿಗಳು, ದಡದಹಳ್ಳಿ ಪಟ್ಟದ ಮಠದ ಷಡಕ್ಷಸ್ವಾಮಿಗಳು, ಹಂಚೀಪುರ ಪಟ್ಟದ ಮಠದ ಚನ್ನಬಸವಸ್ವಾಮಿಗಳು, ಬೀಚನಹಳ್ಳಿ ಪುರದ ಮಠದ ನಾಗೇಂದ್ರಸ್ವಾಮಿಗಳು ಮತ್ತು ಜಕ್ಕಹಳ್ಳಿ ಬಿಕ್ಷದ ದಾಸೋಹ ಮಠದ ಶಿವಕುಮಾರಸ್ವಾಮಿಗಳು ನೇತೃತ್ವದಲ್ಲಿ ಹೋಮ ಮತ್ತು ರುದ್ರಾಭಿಷೇಕದ ಮೂಲಕ ಜಾತ್ರೆಯೂ ಪ್ರಾರಂಭಗೊಳ್ಳಲಿದೆ. ಅದೇ ದಿನ ಸಂಜೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಇನ್ನು ಎರಡನೇ ದಿನವಾದ ಮಂಗಳವಾರ ಬೆಳಿಗ್ಗೆ 6 ಗಂಟೆಗೆ ದೇವರಿಗೆ ಅಭಿಷೇಕ ಪೂಜೆ, 9 ಗಂಟೆಗೆ ಹಾಲುಹರವಿ ಸೇವೆ ಮತ್ತು ಕೊಂಡೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಅದೇ ದಿನ ರಾತ್ರಿ ಸಾಗರೆ ಸುರೇಶ್ ಮತ್ತು ತಂಡದವರಿಂದ ’ಸುಗಮ ಸಂಗೀತಾ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಹಾಗೆಯೇ ಭಕ್ತಿಗೀತೆ, ಜಾನಪದಗೀತೆ, ಹಾಗೂ ಚಲನಚಿತ್ರ ಗೀತೆಗಳು ಕಾರ್ಯಕ್ರಮ ಏರ್ಪಪಡಿಸಲಾಗಿದೆ.
ಇನ್ನು ಜಾತ್ರೆಯ ಮೂರನೇ ದಿನವಾದ ಬುಧವಾರ ಬೆಳಿಗ್ಗೆ 5 ಗಂಟೆಗೆ ಬಿಲ್ವಾರ್ಚನೆ ಮತ್ತು ದೇವರಿಗೆ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ಬೆಳಿಗ್ಗೆ 10 ಗಂಟೆಗೆ ತೆಲಗುಮಸಹಳ್ಳಿ, ಕೂಸಣ್ಣ ತಂಡದವರಿಂದ ಮಹದೇಶ್ವರ ಭಜನೆ ಏರ್ಪಡಿಸಲಾಗಿದೆ. ಹಾಗೂ ಅದೇ ದಿನ ರಾತ್ರಿ 9 ಗಂಟೆಗೆ ಆರ್ಕೆಸ್ಟ್ರಾ ಏರ್ಪಡಿಸಲಾಗಿದುದ, ಜೀ ಕನ್ನಡ ಸರಿಗಮಪ ಖ್ಯಾತಿಯ ಕಂಬದ ರಂಗಯ್ಯ, ಶಿವಾನಿ, ವಿ.ಎಸ್.ಕುಮಾರ್, ಪ್ರೀತಿ ಸಿಂಕನ, ಮಿಮಿಕ್ರಿ ಸುಧಾರಕರ್ ಹಾಗೂ ಡಿಕೆಡಿ ನೃತ್ಯಪಟುಗಳು ಸೇರಿದಂತೆ ಜೂನಿಯರ್ ವಿಷ್ಣುವರ್ಧನ್, ಜೂನಿಯರ್ ಅಂಬರೀಶ್ ಆಗಮಿಸಲಿದ್ದಾರೆ.
ಅಲ್ಲದೆ ಜಾತ್ರೆಯ ಅಂಗವಾಗಿ ದೇವಾಲಯಕ್ಕೆ ಆಗಮಿಸುವ ಭಕ್ತಾಧಿಕಗಳಿಗೆ ೩ ದಿನಗಳ ಕಾಲ ದಾಸೋಹದ ವ್ಯವಸ್ಥೆಯನ್ನೂ ಮಾಡಲಾಗಿದೆ.
ಜಾತ್ರೆಯ ಅಂಗವಾಗಿ ದೇವಸ್ಥಾನ ಸಮಿತಿಯವತಿಯಿಂದ ಉತ್ತಮ ಹೋರಿಗಳಿಗೆ ಪ್ರಥಮ ಬಹುಮಾನ ೫೦೦೦ ರೂ., ದ್ವಿತೀಯ ಬಹುಮಾನ ೩,೦೦೦ ರೂ., ತೃತೀಯ ಬಹುಮಾನ ೨,೦೦೦ ರೂ. ಜತೆಗೆ ಉತ್ತಮ ಗೂಳಿ ಹಾಗೂ ರಾಸುಗಳಿಗೆ ಪ್ರಥಮ ಬಹುಮಾನ ೨೦ ಗ್ರಾಂ ಬೆಳ್ಳಿ, ದ್ವಿತೀಯ ಬಹುಮಾನ ೧೫ ಗ್ರಾಂ ಬೆಳ್ಳಿ ಹಾಗೂ ತೃತೀಯ ಬಹುಮಾನ ೧೦ ಗ್ರಾಂ ಬೆಳ್ಳಿ ನೀಡಲಾಗುತ್ತಿದೆ.
ಪ್ರತಿವರ್ಷದಂತೆ ಈ ವರ್ಷವೂ ಕಂದೇಗಾಲ ಮಹದೇಶ್ವರ ಸ್ವಾಮಿ ಜಾತ್ರೆಯನ್ನು ವಿಜೃಂಭಣೆಯಿಂದ ಮಾಡಲಾಗುತ್ತಿದೆ. ಹೆಚ್ಚಿನ ಭಕ್ತಿಧಿಗಳು ಆಗಮಿಸಬೇಕು. ರಾಸುಗಳ ಪ್ರದರ್ಶನವೂ ಇರುವುದರಿಂದ ಉತ್ತಮ ರಾಸುಗಳಿಗೆ ಬಹುಮಾನ ನೀಡಲಾಗುವುದು. ಇನ್ನು ಜಾತ್ರೆಗೆ ಎಲ್ಲ ಯುವಕರು, ಗ್ರಾಮಸ್ಥರು ಬೆಂಬಲ ನೀಡಿದ್ದಾರೆ.
-ಪಾಟೀಲ್ ರಾಜಪ್ಪ, ದೇವಸ್ಥಾನ ಸಮಿತಿ ಅಧ್ಯಕ್ಷರು.