ತುಮಕೂರು: ಜಿಲ್ಲೆಯ ಖಾಸಗಿ ಆಂಬುಲೆನ್ಸ್ ನಲ್ಲಿ ನಿಗದಿತ ಸೇವಾ ದರ ಪಾಲನೆ, ಆಂಬುಲೆನ್ಸ್ ಗಳ ಪ್ರಸ್ತುತ ಸೇವೆಗಳಲ್ಲಿ ನಡೆಯುತ್ತಿರುವ ಅನಿಯಮಗಳನ್ನು ತಡೆಗಟ್ಟಿ, ಶುಲ್ಕ ನಿಯಂತ್ರಣ ಹಾಗೂ ಸಾರ್ವಜನಿಕರ ಹಿತಾಸಕ್ತಿಯನ್ನು ಕಾಪಾಡುವ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಅರುಣ್ ಕೃಷ್ಣಯ್ಯ ಹಾಗೂ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಆಡಳಿತಾಧಿಕಾರಿಗೆ ಮನವಿಪತ್ರ ಸಲ್ಲಿಸಿ, ಜಿಲ್ಲೆಯ ಆಂಬುಲೆನ್ಸ್ಗಳ ಸೇವಾ ಚಟುವಟಿಕೆಗಳನ್ನು ಪರಿಶೀಲಿಸಿ, ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಒದಗಿಸಬೇಕಾದ ಸೇವೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿ ನಿಯಮ ರೂಪಿಸಿ ಜಾರಿ ಮಾಡಬೇಕು ಎಂದು ಕೋರಿದರು.
ತುರ್ತು ಪರಿಸ್ಥಿತಿಯಲ್ಲಿ ರೋಗಿಗಳು ಹಾಗೂ ಅವರ ಕುಟುಂಬದವರು ಮಾನಸಿಕವಾಗಿ ಕುಗ್ಗಿರುವ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡು ಹೆಚ್ಚಿನ ಹಣವನ್ನು ಒತ್ತಾಯ ಪೂರ್ವಕವಾಗಿ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಗಳಿವೆ. ಕೆಲವು ಸಂದರ್ಭಗಳಲ್ಲಿ ರೋಗಿಯ ಅಥವಾ ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ನಿರ್ದಿಷ್ಟ ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ಯಲಾಗುತ್ತಿದೆ ಎಂಬ ಆರೋಪಗಳೂ ಇವೆ. ಈ ರೀತಿಯ ಪ್ರಕರಣಗಳು ಸಾರ್ವಜನಿಕರಲ್ಲಿ ಆಂಬುಲೆನ್ಸ್ ಸೇವೆಗಳ ಬಗ್ಗೆ ನಂಬಿಕೆ ಕುಸಿಯುತ್ತಿದೆ. ಆಂಬುಲೆನ್ಸ್ ಸೇವೆಯು ಜೀವ ಉಳಿಸುವ ಅತ್ಯಂತ ಮಹತ್ವದ ಸೇವೆಯಾಗಿದ್ದು, ಅದು ಲಾಭದ ವ್ಯಾಪಾರವಾಗದೆ ಮಾನವೀಯ ಸೇವೆಯಾಗಿರಬೇಕು. ಆದ್ದರಿಂದ ಜಿಲ್ಲೆಯ ಸಾರ್ವಜನಿಕರ ಹಿತದೃಷ್ಟಿಯಿಂದ ಕೆಳಕಂಡ ಕ್ರಮಗಳನ್ನು ತುರ್ತಾಗಿ ಕೈಗೊಳ್ಳುವಂತೆ ಜಿಲ್ಲಾಧ್ಯಕ್ಷ ಅರುಣ್ ಕೃಷ್ಣಯ್ಯ ವಿನಂತಿಸಿದರು.
ಕರವೇ ಜಿಲ್ಲಾ ಯುವ ಘಟಕ ಅಧ್ಯಕ್ಷ ಪವನ್, ಉಪಾಧ್ಯಕ್ಷ ದಿಲೀಪ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುನೀತ್, ಮುಖಂಡರಾದ ವರುಣ್, ನವೀನ್, ಜುನ್ನೇದ್, ರಂಜನ್, ತೇಜು, ಕುಶಾಲ್, ಪ್ರಜ್ವಲ್, ಅಜಯ್, ನಂದೀಶ್, ಮಧು ಮೊದಲಾದವರು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


