ತುಮಕೂರು: ಇತ್ತೀಚಿಗೆ ಖಾಸಗಿ ಟಿವಿವಾಹಿನಿಯಲ್ಲಿ ಪ್ರಸಾರವಾದ ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾದಾಗ ಸಮಾಧಿಯಲ್ಲಿತ್ತು ಖೇಣಿಕೊಟ್ಟ “ವಸ್ತು” ಸಂದರ್ಶನ ವೃಂದದಲ್ಲಿ ಮಾಜಿ ಶಾಸಕ ಉದ್ಯಮಿ ಅಶೋಕ್ ಖೇಣಿ(Ashok Kheny) ಅವರು, ಡಾ.ಶ್ರೀ ಶಿವಕುಮಾರಸ್ವಾಮಿಗಳು ತಮಗೆ ಚಿನ್ನದ ಕರಡಿಗೆ ಮಾಡಿಸಿಕೊಳ್ಳಲು ಸೂಚಿಸಿದ್ದರು. ಲಿಂಗೈಕ್ಯರಾಗುವ ಸಂದರ್ಭದಲ್ಲಿ ನಾನು ಕೊಟ್ಟ ಚಿನ್ನದ ಕರಡಿಗೆ ಧರಿಸುತ್ತೇನೆ ಎಂದಿದ್ದರು ಎಂದು ಹೇಳಿರುವುದು ಸುಳ್ಳು ಸತ್ಯಕ್ಕೆ ದೂರವಾಗಿದೆ ಎಂದು ಸಿದ್ಧಗಂಗಾ ಮಠ ಸ್ಪಷ್ಟನೆ ನೀಡಿದೆ.
ಮಠದ ಪರವಾಗಿ ಆಡಳಿತಾಧಿಕಾರಿ ಎಸ್.ವಿಶ್ವನಾಥಯ್ಯ ಪತ್ರಿಕಾ ಪ್ರಕಟಣೆ ಹೊರಡಿಸಿ ಸ್ಪಷ್ಟನೆ ನೀಡಿದ್ದು, ಖೇಣಿ ಅವರು ಸಂದರ್ಶನದಲ್ಲಿ ಶ್ರೀಗಳ ಕುರಿತಾಗಿ ಅನೇಕ ಅಸತ್ಯದ ಮಾತುಗಳನ್ನಾಡಿದ್ದು, ಪೂಜ್ಯ ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಜಿ ಅವರು ಯಾವುದೇ ಭೇದ–ಭಾವ ಇಲ್ಲದೆ ಜಾತಿ ಮತವೆನ್ನದೆ ಎಲ್ಲರನ್ನೂ ಸಮಾನರಾಗಿ ಕಾಣುತ್ತಿದ್ದರು. ಅಶೋಕ್ ಖೇಣಿ ಅವರ ಹತ್ತಿರ ಯಾವುದೇ ಚಿನ್ನದ ಕರಡಿಗೆ ಮಾಡಿಕೊಂಡಿರುವುದಿಲ್ಲ. ಆ ರೀತಿ ಕೋರಿಕೆ ಸಹ ಇಟ್ಟಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಶೋಕ್ ಖೇಣಿ, ಶ್ರೀಗಳು ಲಿಂಗೈಕ್ಯರಾದ ವೇಳೆ ತಮ್ಮ ಹೆಸರು ಬರೆದಿದ್ದ ಚಿನ್ನದ ಕರಡಿಗೆ ಧರಿಸಿದ್ದರು. ಅದು ಲಿಂಗೈಕ್ಯ ಸಮಾಧಿಯಲ್ಲಿ ಶ್ರೀಗಳ ಬಳಿ ಇತ್ತು. ಇದನ್ನು ನಾನು ಶ್ರೀಗಳ ಅಂತ್ಯಸಂಸ್ಕಾರಕ್ಕೆ ಬಂದಿದ್ದ ಸಂದರ್ಭದಲ್ಲಿ ಕೆಎರ್ಐಡಿಎಲ್ ಅಧ್ಯಕ್ಷರಾಗಿದ್ದ ರುದ್ರೇಶ್ ಅವರ ಬಳಿ ಚರ್ಚಿಸಿ ಖಚಿತಪಡಿಸಿಕೊಂಡೆನೆಂಬ ಹೇಳಿಕೆಗಳು ಸತ್ಯಕ್ಕೆ ದೂರವಾಗಿದೆ. ಅಷ್ಟಕ್ಕೂ ಖೇಣಿ ಶ್ರೀಗಳ ಅಂತ್ಯ ಸಂಸ್ಕಾರಕ್ಕೆ ಬಂದಿಲ್ಲ, ಹೀಗಿರುವಾಗ ರುದ್ರೇಶ್ ಜೊತೆ ಮಾತನಾಡುವ ಪ್ರಮೇಯವೇ ಇಲ್ಲ. ಇದು ಬಾಲಿಶತನದಿಂದ ಕೂಡಿದ ಹೇಳಿಕೆ. ಅನಗತ್ಯವಾಗಿ ಈಗಿನ ಮಠಾಧ್ಯಕ್ಷರ ಶ್ರೀ ಸಿದ್ಧಲಿಂಗಸ್ವಾಮೀಜಿ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ ಎಂದಿದ್ದಾರೆ.
ಇನ್ನೂ ಶ್ರೀ ಮಠಕ್ಕೆ ಚಿನ್ನ–ಬೆಳ್ಳಿ ಕಾಣಿಕೆಯಾಗಿ ಭಕ್ತರು ನೀಡುವುದು ತೀರಾ ವಿರಳ. ಅಂತಹ ಸ್ವೀಕೃತವಾದ ಎಲ್ಲಾ ಲೋಹಗಳನ್ನು ಇನ್ವೆಂಟರಿ ರಿಜಿಸ್ಟರ್ ನಲ್ಲಿ ದಾಖಲಿಸಿ ಸೂಕ್ತವಾಗಿ ನಿರ್ವಹಿಸಲಾಗುತ್ತಿದೆ ಎಂದು ವಿಶ್ವನಾಥಯ್ಯ ಅವರು ಖೇಣಿ ಅವರ ಹೇಳಿಕೆಗಳನ್ನು ಮಠದ ಪರವಾಗಿ ಅಲ್ಲಗಳೆದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
