ಕೊರಟಗೆರೆ: ತಾಲ್ಲೂಕಿನ ಸಾರ್ವಜನಿಕರ ಅನುಕೂಲಕ್ಕಾಗಿ ಫ್ರೆಂಡ್ಸ್ ಗ್ರೂಪ್ ಸೇವಾ ಸಮಿತಿ ವತಿಯಿಂದ ನೂತನ ಉಚಿತ ತುರ್ತು ವಾಹನವನ್ನು (Ambulance) ಇಂದು ಲೋಕಾರ್ಪಣೆ ಮಾಡಲಾಗುತ್ತಿದೆ ಎಂದು ಸಮಿತಿಯ ಅಧ್ಯಕ್ಷರಾದ ರವಿಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಫ್ರೆಂಡ್ಸ್ ಗ್ರೂಪ್ ಸೇವಾ ಸಮಿತಿ ಮತ್ತು ಜಗ್ಗೇಶ್ ಅಭಿಮಾನಿಗಳ ಸಂಘದ ಜಂಟಿ ಆಶ್ರಯದಲ್ಲಿ ಇಂದು ಸಂಜೆ 5:00 ಗಂಟೆಗೆ ಪಟ್ಟಣದ ಪುರಸಭಾ ಕಾರ್ಯಾಲಯದ ಮುಂಭಾಗದಲ್ಲಿ ಈ ಸೇವಾ ಕಾರ್ಯಕ್ರಮ ನಡೆಯಲಿದೆ ಎಂದರು.
ಹೊಸ ವಾಹನದ ಅವಶ್ಯಕತೆ: ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಹಳೆಯ ತುರ್ತು ವಾಹನವು ದುರಸ್ತಿಯಲ್ಲಿದ್ದ ಕಾರಣ, ಸಾರ್ವಜನಿಕರ ತುರ್ತು ಅಗತ್ಯಗಳಿಗಾಗಿ ನೂತನ ವಾಹನವನ್ನು ಸಜ್ಜುಗೊಳಿಸಲಾಗಿದೆ. ವಾಹನ ಸಮರ್ಪಣೆಯ ಜೊತೆಗೆ ಗುರುವಂದನೆ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ, ಇದೇ ವೇಳೆ ಚಲನಚಿತ್ರ ಹಾಸ್ಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.
ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹಾಗೂ ಎಲೆರಾಂಪುರದ ಡಾ. ಶ್ರೀ ಹನುಮಂತನಾಥ ಸ್ವಾಮೀಜಿ ಅವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ, ಮಾಜಿ ಸಚಿವರು ಹಾಗೂ ಶಾಸಕ ಕೆ. ಎನ್.ರಾಜಣ್ಣ, ರಾಜ್ಯಸಭಾ ಸದಸ್ಯರು ಹಾಗೂ ಚಿತ್ರನಟ ಜಗ್ಗೇಶ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ.
“ನಮ್ಮ ಸಂಘಟನೆಗಳು ಕಳೆದ 20 ವರ್ಷಗಳಿಂದ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ನಿರಂತರ ಸೇವೆ ಸಲ್ಲಿಸುತ್ತಿವೆ. ಈ ಕಾರ್ಯಕ್ರಮಕ್ಕೆ ತಾಲ್ಲೂಕಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು” ಎಂದು ಜಗ್ಗೇಶ್ ಅಭಿಮಾನಿಗಳ ಸಂಘದ ಮಲ್ಲಣ್ಣ ಮನವಿ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಫ್ರೆಂಡ್ಸ್ ಗ್ರೂಪ್ ನ ಪ್ರದೀಪ್ ಕುಮಾರ್, ವಿಎಸ್ ಎಸ್ ಎನ್ ಹಾಗೂ ಟಿಎಪಿಸಿಎಂಎಸ್ ನಿರ್ದೇಶಕ ಕೆ.ವಿ. ಪುರುಷೋತ್ತಮ್, ಹರ್ಷ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


