ಸರಗೂರು: ವಿಶ್ವ ಪರಿಸರ ದಿನವನ್ನು ವಿಶ್ವಾದ್ಯಂತ ಪರಿಸರದ ಬಗ್ಗೆ ಜಾಗೃತಿ ಮತ್ತು ನಮ್ಮ ಪರಿಸರದ ರಕ್ಷಣೆಯನ್ನು ಉತ್ತೇಜಿಸಲು ಆಚರಿಸಲಾಗುತ್ತದೆ. ಜೀವಿಗಳ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಆಗತ್ತೂರು ಶಾಲೆಯ ದೈಹಿಕ ಶಿಕ್ಷಕ ಬಂಗಾರಯ್ಯ ತಿಳಿಸಿದರು.
ತಾಲ್ಲೂಕಿನ ಸಾಗರೆ ಗ್ರಾಪಂ ವ್ಯಾಪ್ತಿಯ ಆಗತ್ತೂರು ಗ್ರಾಮದಲ್ಲಿ ಬುಧವಾರ ದಂದು ವಿಶ್ವ ಪರಿಸರ ದಿನಾಚರಣೆಯಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಹಾಗೂ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಪರಿಸರದ ಸಮೃದ್ಧಿ ಆರೋಗ್ಯಕರ ಜೀವನ ಮತ್ತು ಭೂಮಿಯ ಮೇಲಿನ ಪ್ರತಿಯೊಂದು ಜೀವಿಯ ಜೀವನದ ಅಸ್ತಿತ್ವಕ್ಕೆ ಕಾರಣವಾಗಿದೆ.
ಮಾನವ ಸೇರಿದಂತೆ ಇತರೆ ಪ್ರಾಣಿ, ಪಕ್ಷಿಗಳು, ಸೇರಿದಂತೆ ಪ್ರತಿಯೊಂದು ಜೀವ ಸಂಕುಲ ಆಹಾರ, ಗಾಳಿ, ನೀರು ಇತರೆ ಅಗತ್ಯತೆಗಳಿಗಾಗಿ ಪರಿಸರವನ್ನ ಅವಲಂಬಿಸಿದೆ ಎಂದರೆ ತಪ್ಪಾಗಲಾರದು. ಆದರೆ ಇತ್ತೀಚಿನ ದಿನಗಳಲ್ಲಿ ಮಾನವನು ಆಧುನಿಕ ಬದುಕಿನ ಗೀಳಿಗೆ ಬಿದ್ದು ಪರಿಸರವನ್ನು ನಾಶ ಮಾಡುತ್ತಿದ್ದಾನೆ. ಈಗ ಮಾನವನ ಈ ದುರಾಸೆಯಿಂದ ಗಾಳಿ, ನೀರು, ಮಣ್ಣು ಮುಂತಾದ ಪರಿಸರದ ಪ್ರತಿಯೊಂದು ಅಂಶವೂ ಕಲುಷಿತಗೊಂಡಿದೆ. ಮನುಷ್ಯ ತನ್ನ ಅಭಿವೃದ್ಧಿಗಾಗಿ ತನಗೆ ಅರಿವಿಲ್ಲದಂತೆ ಪರಿಸರವನ್ನು ಹಾಳು ಮಾಡುತ್ತಿದ್ದಾರೆ ಎಂದರು.

ಶಾಲೆಯ ಮುಖ್ಯ ಶಿಕ್ಷಕ ಸಿದ್ದರಾಜು ಮಾತನಾಡಿ, “ಹೀಗಾಗಿ ಪ್ರತಿಯೊಬ್ಬರಲ್ಲೂ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಸಲುವಾಗಿ ಪ್ರತಿವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷ ಬೇರೆ ಬೇರೆ ಧ್ಯೇಯವಾಕ್ಯದೊಂದಿಗೆ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಇದರ ಮುಖ್ಯ ಉದ್ದೇಶ ಪರಿಸರದ ಬಗ್ಗೆ ಪ್ರತಿ ಮನುಷ್ಯನಲ್ಲೂ ಜಾಗೃತಿ ಮೂಡಿಸುವುದು ಮತ್ತು ಪರಿಸರವನ್ನು ಹಾಳು ಮಾಡುವುದನ್ನ ತಡೆಯುವುದಾಗಿದೆ” ಎಂದು ಹೇಳಿದರು.
ವಿಶ್ವ ಪರಿಸರ ದಿನವು ಸಾರ್ವಜನಿಕವಾಗಿ ತಲುಪಲು ಜಾಗತಿಕ ವೇದಿಕೆಯಾಗಿ ಬೆಳೆದಿದೆ. ಪ್ರತಿವರ್ಷ 143ಕ್ಕೂ ಹೆಚ್ಚು ದೇಶಗಳು ಈ ದಿನದಲ್ಲಿ ಭಾಗಿಯಾಗುತ್ತವೆ. ಪ್ರತಿ ವರ್ಷ ವಿಶ್ವ ಪರಿಸರ ದಿನವನ್ನು ವಿವಿಧ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತದೆ. ಪ್ರಮುಖ ಸಂಸ್ಥೆಗಳು, ಎನ್ ಜಿಒಗಳು, ಸಮುದಾಯಗಳು, ಸರ್ಕಾರಗಳು ವಿಶ್ವಾದ್ಯಂತ ಪರಿಸರ ದಿನವನ್ನು ವಿವಿಧ ರೀತಿಯಲ್ಲಿ ಆಚರಿಸುತ್ತವೆ.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಗ್ಗೆ ಸಂಘದ ಸದಸ್ಯರಿಗೆ ಮಾಹಿತಿಯನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಸಾಗರೆ ಗ್ರಾಪಂ ಅಧ್ಯಕ್ಷೆ ವಸಂತ, ಎಸ್ಡಿಎಂಸಿ ಅಧ್ಯಕ್ಷ ಮಂಟಚಾರಿ, ಗ್ರಾಪಂ ಸದಸ್ಯರು ಸಂತೋಷ್, ಚಂದ್ರಮ್ಮ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲ್ಲೂಕು ನೋಡಲ್ ಅಧಿಕಾರಿ ದೇವರಾಜು, ಹಂಚೀಪುರ ವಲಯದ ಮೇಲ್ವಿಚಾರಕರು ಸಲ್ಮಾ, ಗ್ರಾಪಂ ಬಿಲ್ ಕಲೆಕ್ಟರ್ ಕಾಂತರಾಜು,ಇನ್ನೂ ಮುಖಂಡರು ಸೇರಿದಂತೆ ಹಾಗೂ ಸಂಘದ ಸದಸ್ಯರು ಮತ್ತು ಶಾಲೆ ಮಕ್ಕಳು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


