ತುರುವೇಕೆರೆ: ತಾಲೂಕಿನ ಮಲ್ಲಾಘಟ್ಟ ಸುತ್ತಮುತ್ತ ಸುಮಾರು 35 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಮುಖ್ಯಮಂತ್ರಿ ಆದ ಬಳಿಕ ಇದೇ ಮೊದಲ ಬಾರಿಗೆ ಶನಿವಾರ ತುರುವೇಕೆರೆ ಮಲ್ಲಾಘಟ್ಟ ಕ್ಷೇತ್ರಕ್ಕೆ ಭೇಟಿ ನೀಡಿದ ಅವರು, ಮಲ್ಲಾಘಟ್ಟದ ಗಂಗಾಧರೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರಮಾಣವಚನ ಸ್ವೀಕಾರ ವೇಳೆ ಹಿಂದೂ ಸಂಪ್ರದಾಯ ಅನುಸರಿಸಿದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕಾರಣಿಗಿಂತ ಭಕ್ತಿ ಮುಖ್ಯ. ಭಕ್ತನಿಗೂ ಭಗವಂತನಿಗೂ ಇರುವ ಸಂಬಂಧ ವೈಯಕ್ತಿಕವಾದದ್ದು. ಪ್ರಮಾಣವಚನ ಕಾರ್ಯಕ್ರಮಕ್ಕೆ ಹಿಂದೂ, ಕ್ರೈಸ್ತ, ಸಿಖ್, ಬೌದ್ಧ ಸೇರಿದಂತೆ ಎಲ್ಲಾ ಧರ್ಮಗಳ ಧಾರ್ಮಿಕ ಮುಖಂಡರನ್ನು ಆಹ್ವಾನಿಸಲಾಗಿತ್ತು ಎಂದರಲ್ಲದೆ ರಾಜ್ಯದ ಹಿತ ಕಾಪಾಡುವ ಜವಾಬ್ದಾರಿ ತಮ್ಮ ಮೇಲಿದ್ದು ಎಲ್ಲ ಧರ್ಮಗಳ ಆಶೀರ್ವಾದ ಪಡೆಯುವ ಉದ್ದೇಶದಿಂದ ಆ ರೀತಿಯ ಕಾರ್ಯಕ್ರಮ ನಡೆಸಲಾಗಿತ್ತು ಎಂದು ಸ್ಪಷ್ಟಪಡಿಸಿದರು.
ಮಲ್ಲಾಘಟ್ಟದ ಗಂಗಾಧರೇಶ್ವರನಿಗೆ ಹರಕೆ ಹೊತ್ತಿದ್ದೀರಾ ಎಂಬ ಪ್ರಶ್ನೆಗೆ, ಯಾವುದೇ ಹರಕೆ ಇಲ್ಲ. ಇದು ನನ್ನ ಭಕ್ತಿ ಮತ್ತು ಭಾವನೆ. ಜನರ ಕಲ್ಯಾಣ, ರಾಜ್ಯದ ಸುಭಿಕ್ಷೆ, ಶಾಂತಿ ಹಾಗೂ ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದ್ದೇನೆ. ನನಗೆ ದೊರೆತಿರುವ ಅಧಿಕಾರವನ್ನು ಜನಸೇವೆಗೆ ಮುಡಿಪಾಗಿಟ್ಟಿದ್ದೇನೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಇನ್ನೂ ರೈತರು ಹಾಗೂ ಮಲ್ಲಾಘಟ್ಟ ಸುತ್ತಮುತ್ತಲಿನ ಜನರಿಗೆ ಅನುಕೂಲವಾಗುವಂತೆ ಕಾಲುವೆ ವ್ಯವಸ್ಥೆ, ಸಮುದಾಯ ಭವನ, ಅತಿಥಿ ಗೃಹ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುವುದು. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಈ ಪವಿತ್ರ ಸನ್ನಿಧಿಗೆ ಭೇಟಿ ನೀಡಿದ್ದು, ಗಂಗಾಧರೇಶ್ವರ ದೇವಾಲಯ ಹಾಗೂ ಮಲ್ಲಾಘಟ್ಟ ಕೆರೆ ತಮಗೆ ವಿಶೇಷ ಭಾವನಾತ್ಮಕ ನಂಟು ಹೊಂದಿರುವ ಸ್ಥಳಗಳಾಗಿವೆ. ಇದು ಐತಿಹಾಸಿಕ ಹಾಗೂ ಪವಿತ್ರ ಕ್ಷೇತ್ರವಾಗಿದೆ. ಅಭಿವೃದ್ಧಿಗೆ ಏನು ಬೇಕು ಎಂದು ಸ್ಥಳೀಯರ ಸಲಹೆ ಪಡೆದು ಅಗತ್ಯ ನೆರವು ನೀಡಲಾಗುವುದು ಎಂದು ಡಿಕೆಶಿ ತಿಳಿಸಿದರು.
ತುರುವೇಕೆರೆ ಪಟ್ಟಣಕ್ಕೆ ನೂತನ ಮುಖ್ಯಮಂತ್ರಿಗಳು ಆಗಮಿಸುತ್ತಿದ್ದಂತೆ ಬಾಣಸಂದ್ರ ವೃತ್ತದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಡಿಕೆಶಿಗೆ ಹಾರ ತುರಾಯಿ ಹಾಕಲು ಮುಗಿಬಿದ್ದರು. ಆಗ ತಹಬದಿಗೆ ತರಲು ಕೆಲ ಕ್ಷಣ ಪೊಲೀಸರು ಹರಸಾಹಸ ಪಡಬೇಕಾಯಿತು.
ನೋಣವಿನಕೆರೆ ಕಾಡುಸಿದ್ದೇಶ್ವರ ಮಠದ ಡಾ. ಶ್ರೀಕರಿವೃಷಭ ದೇಶಿಕೇಂದ್ರ ಸ್ವಾಮೀಜಿಗಳು, ಶಾಸಕರುಗಳಾದ ಎಂ.ಟಿ ಕೃಷ್ಣಪ್ಪ, ತಿಪಟೂರು ಕೆ.ಷಡಕ್ಷರಿ, ಕುಣಿಗಲ್ ರಂಗನಾಥ್, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಜಿಲ್ಲಾಧಿಕಾರಿ ಶುಭಕಲ್ಯಾಣ್, ಎಸ್ಪಿ ಅಶೋಕ್ ಆರ್., ಎಸಿ ಸಪ್ತಶ್ರೀ, ತಹಸೀಲ್ದಾರ್ ಕುಂಜ ಅಹಮದ್, ಕಾಂಗ್ರೆಸ್ ಮುಖಂಡರಾದ ಬಿ.ಎಸ್. ವಸಂತ್ ಕುಮಾರ್, ಸುಬ್ರಹ್ಮಣ್ಯ, ಶ್ರೀಕಂಠೇಗೌಡ, ರಾಜಣ್ಣ, ಪ್ರಸನ್ನಕುಮಾರ್, ನಾಗರಾಜ್, ಎ.ಎಸ್. ಮೂರ್ತಿ, ಅಧಿಕಾರಿಗಳು ಹಾಗೂ ಕಾಂಗ್ರೆಸ್ ಮುಖಂಡರುಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


