ತುಮಕೂರು: ಕಳೆದ ಹಲವು ದಿನಗಳಿಂದ ತುಮಕೂರು ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಸಾಕಷ್ಟು ಪ್ರದೇಶಗಳಲ್ಲಿ ಮನೆಗಳು ಕುಸಿದಿವೆ. ಹಲವಾರು ಮನೆಗಳು ಕುಸಿಯುವ ಹಂತದಲ್ಲಿದ್ದರೂ ಇನ್ನೂ ಅಧಿಕಾರಿಗಳು ಚಳಿ ಬಿಟ್ಟು ಕೆಲಸ ಮಾಡಲು ಮುಂದಾಗುತ್ತಿಲ್ಲ ಎಂದು ಮಳೆಯಿಂದ ಸಂಕಷ್ಟದಲ್ಲಿರುವ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಮಕೂರು ತಾಲ್ಲೂಕು ಮತ್ತು ಜಿಲ್ಲೆಯ ಹೆತ್ತೆನಹಳ್ಳಿ, ಗೂಳೂರು ಹೋಬಳಿಯಲ್ಲಿ ತೀವ್ರ ಮಳೆಯಿಂದಾಗಿ ಸುಮಾರು 10 ಮನೆಗಳು ಬೀಳುವ ಹಂತದಲ್ಲಿತ್ತು. ಈ ಬಗ್ಗೆ ಇಲ್ಲಿನ ನಿವಾಸಿಗಳು ಅಧಿಕಾರಿಗಳಿ ಸಾಕಷ್ಟು ಬಾರಿ ಹೇಳಿದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯರು ನಮ್ಮ ತುಮಕೂರು ಪ್ರತಿನಿಧಿಯೊಂದಿಗೆ ದೂರಿದ್ದಾರೆ.
ಸಾರ್ವಜನಿಕರ ಹೇಳಿಕೆಯನ್ನು ದಾಖಲಿಸಿದ ನಮ್ಮ ಪ್ರತಿನಿಧಿ ಪಿಡಿಓ ಅವರನ್ನು ಸಂಪರ್ಕಿಸಿದ್ದು, ತಕ್ಷಣವೇ ಕಾರ್ಯಪ್ರವೃತರಾದ ಪಿಡಿಓ, ಸಂಕಷ್ಟದಲ್ಲಿದ್ದ ಜನರಿಗೆ ತಾತ್ಕಾಲಿಕವಾಗಿ ಉಳಿದುಕೊಳ್ಳಲು ಪಂಚಾಯತ್ ನ ಹಳೆಯ ಕಟ್ಟಡದಲ್ಲಿ ವ್ಯವಸ್ಥೆ ಮಾಡಿಸಿಕೊಟ್ಟಿದ್ದಾರೆ. ಪಿಡಿಓ ಅವರು ಕ್ಷಿಪ್ರವಾಗಿ ಕೈಗೊಂಡ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಏರಿಯಾದಲ್ಲಿ 10 ಮನೆಗಳಿಗೆ ಹಾನಿಯಾಗಿದ್ದು, ಇಲ್ಲಿ ವಾಸಿಸುತ್ತಿರುವ ಜನರು ಮುಂದಿನ ಜೀವನ ಹೇಗೆ ಎಂಬ ಆತಂಕದಲ್ಲಿದ್ದಾರೆ. ಬಹುತೇಕ ಮಣ್ಣಿನ ಗೋಡೆ ಹೊಂದಿರುವ ಬಡ ಜನರ ಮನೆಗಳು ಕುಸಿದು ನೆಲ ಸೇರಲು ಸಿದ್ಧವಾಗಿದೆ. ಇಷ್ಟೊಂದು ಗಂಭೀರವಾದ ಸಮಸ್ಯೆ ಇದ್ದರೂ ಇಲ್ಲಿನ ವಿಎ ಮಾತ್ರ ತನಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವಂತಿದ್ದಾರೆ. ಕೊನೆ ಪಕ್ಷ ಇದೀಗ ಪಿಡಿಒ ಅವರು ಮಾಡಿರುವ ತಾತ್ಕಾಲಿಕ ವಸತಿ ವ್ಯವಸ್ಥೆಯನ್ನು ಪರಿಶೀಲನೆ ಮಾಡಲು ಕೂಡ ಈ ಕಡೆಗೆ ವಿಎ ಬಂದಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಜನ ಪ್ರತಿನಿಧಿಗಳ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅಮಾಯಕ ಮಹಿಳೆಯೊಬ್ಬರು, ಓಟು ಕೇಳಲು ಬರ್ತಾರಪ್ಪ, ಆದ್ರೆ, ನಮ್ಮ ಕಷ್ಟ ಕೇಳಲು ಯಾರು ಬರ್ತಿಲ್ಲ, ಅಧಿಕಾರಿಗಳು ಬರ್ತಾರೆ ಹೋಗ್ತಾರೆ, ಆದ್ರೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಇಲ್ಲಿನ ಸಮಸ್ಯೆಗಳ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ತೀವ್ರ ಬೇಸರ ಹೊರ ಹಾಕಿದ್ದಾರೆ.
ತುಮಕೂರಿನಾದ್ಯಂತ ಮಳೆಯಿಂದ ತೀವ್ರ ಹಾನಿಯಾಗುತ್ತಿದ್ದರೂ, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯಲ್ಲಿ ನಡೆಯುತ್ತಿರುವ ಸಮಸ್ಯೆಗಳ ಕುರಿತು ಗಮನ ಹರಿಸಬೇಕು. ಸಚಿವರು ಬೆಂಗಳೂರಿನಲ್ಲೇ ಬ್ಯುಸಿಯಾಗದೇ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಸಂಕಷ್ಟಕ್ಕೊಳಗಾಗಿರುವ ಜನರ ಕಷ್ಟವನ್ನು ಆಲಿಸಿ, ಪರಿಹರಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ವರದಿ: ಶಿವಕುಮಾರ್, ಮೇಸ್ಟ್ರುಮನೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz