ಮಂಗಳೂರು: ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್ ಪಿಎಲ್) ಆವರಣದಲ್ಲಿ ಬುಧವಾರ ಮಧ್ಯಾಹ್ನ ಭಾರೀ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ 9 ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ.
ಸ್ಫೋಟದ ತೀವ್ರತೆಗೆ ಮಂಗಳೂರಿನ ಕಾಟಿಪಳ್ಳ, ಕಾನಾ, ಬಜ್ಪೆ, ಅಂಗರಗುಂಡಿ, ಕುಳಾಯಿ ಮತ್ತು ಜೋಕಟ್ಟೆ ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರದೇಶಗಳು ಬೆಚ್ಚಿಬಿದ್ದಿವೆ. ಜೋಕಟ್ಟೆಯಲ್ಲಿರುವ ಎಂಆರ್ ಪಿಎಲ್ ಘಟಕದ ದಿಕ್ಕಿನಿಂದ ದಟ್ಟವಾದ ಕಪ್ಪು ಹೊಗೆ ಆಕಾಶಕ್ಕೆ ಮೇಲಕ್ಕೆ ಬರುತ್ತಿರುವುದು ಕಂಡುಬಂದಿದೆ.
ವಿಮಾನ ನಿಲ್ದಾಣದ ಕಿಟಕಿ ಗಾಜುಗಳು ನುಚ್ಚುನೂರು:
ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಚೇರಿಗಳು ಸೇರಿದಂತೆ ಸುತ್ತಮುತ್ತಲಿನ ಕೆಲವು ಸ್ಥಳಗಳ ಕಟ್ಟಡಗಳ ಕಿಟಕಿ ಗಾಜುಗಳು ಒಡೆದು ಹೋಗಿವೆ ಎಂದು ವರದಿಯಾಗಿದೆ. ಭಾರೀ ಶಬ್ದ ಕೇಳಿದ ಕೂಡಲೇ ಆತಂಕಗೊಂಡ ಸ್ಥಳೀಯರು ಹಾಗೂ ಕಾರ್ಖನೆಯ ಸಮೀಪದ ನಿವಾಸಿಗಳು ಭಯದಿಂದ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ.
ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಬೆಂಕಿ ನಂದಿಸಲು ನವ ಮಂಗಳೂರು ಬಂದರು ಪ್ರಾಧಿಕಾರ, ಕದ್ರಿ ಹಾಗೂ ಪಾಂಡೇಶ್ವರ ಅಗ್ನಿಶಾಮಕ ಠಾಣೆಗಳಿಂದ ತುರ್ತು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಎಂಆರ್ಪಿಎಲ್ ಆವರಣದ ಮೂರನೇ ಹಂತದ ಸಿಎಸ್ಟಿ ಘಟಕದಲ್ಲಿ ಈ ಸ್ಫೋಟ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ಘಟನೆಗೆ ನಿಖರವಾದ ಕಾರಣವೇನು ಮತ್ತು ಯಾವ ಘಟಕದಲ್ಲಿ ಸ್ಫೋಟ ಸಂಭವಿಸಿದೆ ಎಂಬ ಬಗ್ಗೆ ಕಂಪನಿ ಅಥವಾ ಅಧಿಕೃತ ಮೂಲಗಳಿಂದ ಸ್ಪಷ್ಟ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
