ಬಿಬಿಎಂಪಿ, ತಾಪಂ ಹಾಗೂ ಜಿಪಂಗೆ ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿ ಹೊರತಾಗಿ ರಾಜ್ಯ ಸರ್ಕಾರ ಚುನಾವಣೆ ನಡೆಸಲು ಮುಂದಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರು ಚುನಾವಣೆಗೆ ಸಿದ್ಧರಾಗಬೇಕೆಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ನಗರದ ಹೊರ ವಲಯದಲ್ಲಿ ನಡೆದ ನವಸಂಕಲ್ಪ ಶಿಬಿರದಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ತೀರ್ಪನ್ನು ಆಧರಿಸಿ ಈಗ ತರಾತುರಿಯಲ್ಲಿ ಚುನಾವಣೆ ನಡೆಸಬಹುದು. ಮಧ್ಯಪ್ರದೇಶದಲ್ಲಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಲಾಗಿದೆ. ರಾಜ್ಯ ಸರ್ಕಾರಕ್ಕೆ ಈ ಚುನಾವಣೆಯನ್ನು ನಡೆಸಲಾಗಲೀ ಅಥವಾ ಮಹಿಳೆಯರಿಗೆ, ಹಿಂದುಳಿದವರಿಗೆ ಮೀಸಲಾತಿ ನೀಡುವುದಾಗಲಿ ಇಷ್ಟವಿಲ್ಲ ಎಂದರು.
2023ರ ಏಪ್ರಿಲ್ ಅಥವಾ ಮೇಗೆ ವಿಧಾನಸಭಾ ಚುನಾವಣೆ ಬರುತ್ತದೆ. ಈ ಚುನಾವಣೆಯನ್ನು ನಾವು ಗೆಲ್ಲಲೇಬೇಕು. ಇದು ನಮ್ಮ ಮುಂದಿರುವ ಸವಾಲು. ನಾವು ಅಧಿಕಾರಕ್ಕೆ ಬರಬೇಕು ಎನ್ನುವ ಕಾರಣಕ್ಕೆ ಚುನಾವಣೆ ಗೆಲ್ಲುವುದಲ್ಲ, ರಾಜ್ಯ ಮತ್ತು ಇಲ್ಲಿನ ಜನ ಉಳಿಯಬೇಕು ಎಂಬ ಕಾರಣಕ್ಕೆ ನಾವು ಗೆಲ್ಲಬೇಕಾಗಿದೆ. ಆದ್ದರಿಂದ ನಾವು ಈ ಸವಾಲನ್ನು ಸ್ವೀಕಾರ ಮಾಡಬೇಕು. ಇವರು ವಾಮ ಮಾರ್ಗದಿಂದ ಅಧಿಕಾರಕ್ಕೆ ಬಂದು ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿದ್ದಾರೆ.
ನಮ್ಮ ಪಕ್ಷ 6 ಕಮಿಟಿಗಳನ್ನು ಮಾಡಿದೆ, ಇವುಗಳು ಸುದೀರ್ಘ ಚರ್ಚೆ ನಡೆಸಿ ತನ್ನ ನಿರ್ಣಯಗಳನ್ನು ಮಾಡಿ, ಪಕ್ಷದ ನಿಲುವನ್ನು ಸ್ಪಷ್ಟಪಡಿಸಬೇಕಾಗುತ್ತದೆ. ಇಂದು ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರು ಆತಂಕದಲ್ಲಿ ಬದುಕುವಂತಾಗಿದೆ. ಚರ್ಚ್, ಮಸೀದಿಗಳ ಮೇಲೆ ದಾಳಿ, ಹಿಂದುಗಳನ್ನು ಅಲ್ಪಸಂಖ್ಯಾತರ ವಿರುದ್ಧ ಎತ್ತಿಕಟ್ಟುವ ಕೆಲಸ ದೇಶದ ಉದ್ದಗಲಕ್ಕೂ ನಡೀತಿದೆ. ಹೀಗಾಗಿ ಭಾರತೀಯ ಜನತಾ ಪಕ್ಷವನ್ನು ಅಧಿಕಾರದಿಂದ ತೆಗೆಯಬೇಕಾಗಿದೆ. ಸಂವಿಧಾನದ ಆಶಯಗಳಲ್ಲಿ ನಂಬಿಕೆ, ಬದ್ಧತೆ ಇಲ್ಲದವರು ದೇಶದ್ರೋಹಿಗಳು ಎಂದು ಕಿಡಿಕಾರಿದರು.
ಅನಗತ್ಯವಾಗಿ ಪಠ್ಯ ಪರಿಷ್ಕರಣೆಗೊಳಪಡಿಸಿ ಪಠ್ಯವನ್ನು ಕೇಸರೀಕರಣ ಮಾಡಲಾಗುತ್ತಿದೆ. ಯಾರೋ ರೋಹಿತ್ ಚಕ್ರತೀರ್ಥ ಎಂಬ ಆರ್.ಎಸ್.ಎಸ್ ಮೂಲದವನನ್ನು ಸಮಿತಿಗೆ ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ಪಠ್ಯದಲ್ಲಿ ಭಗತ್ ಸಿಂಗ್, ನಾರಾಯಣ ಗುರು, ಕುವೆಂಪು ಇಂಥವರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ 10 ಮಂದಿ ಸಾಹಿತಿಗಳು ಪಠ್ಯ ಕ್ರಮದಿಂದ ತಮ್ಮ ಸಾಹಿತ್ಯಗಳನ್ನು ತೆಗೆದುಹಾಕಿ ಎಂದರು.
ಜನರ ಈ ಸಮಸ್ಯೆಗಳನ್ನು ಗಮನದಲ್ಲಿ ಇಟ್ಟುಕೊಂಡು ಹೋರಾಟಗಳನ್ನು ರೂಪಿಸಬೇಕಾಗುತ್ತದೆ. ಇದಕ್ಕೆ ಪಕ್ಷ ಮಾಡಿರುವ ಆರು ಕಮಿಟಿಗಳ ಸದಸ್ಯರು ತಮ್ಮ ಸಲಹೆ ನೀಡಬೇಕು. ನಾವೆಲ್ಲರೂ ಒಂದು ಗೂಡಿ ಈ ದಿಸೆಯಲ್ಲಿ ಹೋರಾಟ ನಡೆಸೋಣ ಎಂದು ಕರೆ ನೀಡಿದರು.
ವರದಿ ಆಂಟೋನಿ ಬೇಗೂರು


