ಲಿಂಗಾಯತ ಪಂಚಮಸಾಲಿ ಸಮುದಾಯದ 2ಎ ಮೀಸಲಾತಿಗೆ ಆಗ್ರಹಿಸಿ ಇದೇ ತಿಂಗಳ 27 ರಂದು ಹಾವೇರಿಯ ಶಿಗ್ಗಾವ್ ನಲ್ಲಿರುವ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸಬೇಕೆಂಬ ಬೇಡಿಕೆ ಇತ್ತು. ಹಲವು ದಿನಗಳಿಂದ ಪ್ರತಿಭಟನೆ, ಹೋರಾಟಗಳು ನಡೆದರೂ ಸರ್ಕಾರ ಆ ಬಗ್ಗೆ ಸ್ಪಂದನೆ ತೋರುತ್ತಿಲ್ಲ. ಹಾಗಾಗಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಈ ತಿಂಗಳ 27 ರಂದು ಶಿಗ್ಗಾವ್ ನಲ್ಲಿರುವ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ಮನೆಗೆ ಬೀಗ ಹಾಕಲಾಗುವುದು ಎಂದರು.
ಸರ್ಕಾರಕ್ಕೆ ಲಿಂಗಾಯತ ಪಂಚಮಸಾಲಿ ಸಮುದಾಯದ ತಮ್ಮ ಬೇಡಿಕೆ ಈಡೇರಿಕೆಗೆ ಗಡುವು ನೀಡಿತ್ತು. ಮುಖ್ಯಮಂತ್ರಿಗಳು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಆದರೆ, ಅವರು ಕೊಟ್ಟ ಮಾತು ತಪ್ಪಿದ್ದಾರೆ. ಹಾಗಾಗಿ ಜೂ.27ರಂದು ಕನಿಷ್ಠ 35–30 ಸಾವಿರ ಜನ ಶಿಗ್ಗಾವಿಯಲ್ಲಿ ಮುಖ್ಯಮಂತ್ರಿಗಳ ಮನೆ ಮುತ್ತಿಗೆ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು
ಈ ಸಂಬಂಧ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರಿಗೆ ಪತ್ರ ಬರೆದಿರುವುದಾಗಿ ಹೇಳಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು, ಜೂ. 27 ರೊಳಗೆ ಮುಖ್ಯಮಂತ್ರಿಗಳು ತಮ್ಮ ನಿರ್ಧಾರ ಹೇಳಬೇಕು. ನಮ್ಮ ತಾಳ್ಮೆಯ ಪರೀಕ್ಷೆ ಮಾಡುವುದು ಬೇಡ ಎಂದರು.
ಹೋರಾಟದ ಮೊದಲ ಹಂತವಾಗಿ ಶಿಗ್ಗಾವ್ ಗೆ ನಿವಾಸಕ್ಕೆ ಮುತ್ತಿಗೆ ಹಾಕುತ್ತೇವೆ. ನಂತರ ಬೆಂಗಳೂರು ನಿವಾಸಕ್ಕೂ ಮುತ್ತಿಗೆ ಹಾಕುವುದಾಗಿ ಅವರು ಹೇಳಿದರು.
ಚುನಾವಣೆಯ ನೆಪ ಹೇಳಿ ತೀರ್ಮಾನಗಳನ್ನು ಹಿಂದಕ್ಕೆ ಹಾಕಬೇಡಿ. ಚುನಾವಣೆಗಳು ಇನ್ನೂ9 ತಿಂಗಳಿದೆ ಎಂದು ಅವರು ಹೇಳಿ, 2ಎ ಮೀಸಲಾತಿಗೆ ಆಗ್ರಹಿಸಿ ಈಗಾಗಲೇ ಪಾದಯಾತ್ರೆ, ಧರಣಿ ಸತ್ಯಾಗ್ರಹ, ಎಲ್ಲ ತಾಲ್ಲೂಕು ಕಚೇರಿಗಳ ಮುಂದೆ ಪ್ರತಿಭಟನೆ ಎಲ್ಲವನ್ನು ನಡೆಸಿದ್ದರೂ ಸರ್ಕಾರ ತಮ್ಮ ಬೇಡಿಕೆಗೆ ಸ್ಪಂದಿಸುತ್ತಿಲ್ಲ ಎಂದು ಅವರು ಅಸಮಾಧಾನ ಹೊರ ಹಾಕಿದರು.
ಮೀಸಲಾತಿ ವಿಚಾರವಾಗಿ ನಮ್ಮಲ್ಲೇ ಹಿತ ಶತ್ರುಗಳಿದ್ದಾರೆ. ಮೀಸಲಾತಿ ಬೇಡ ಎಂದು ನಮ್ಮವರೇ ಒಬ್ಬರು ಸಿಎಂ ಕಿವಿ ಚುಚ್ಚಿದ್ದಾರೆ ಎಂದು ಅವರು ಪರೋಕ್ಷವಾಗಿ ಸಚಿವ ಮುರುಗೇಶ್ ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿ, ನಮ್ಮ ಸಮುದಾಯದ ರಾಜಕೀಯ ನಾಯಕರೇ ಶತ್ರುಗಳಾಗಿದ್ದಾರೆ ಎಂದರು.
ಶಾಲಾ ಪಠ್ಯದಲ್ಲಿ ಬಸವಣ್ಣನವರ ಪಾಠ ಕೈ ಬಿಟ್ಟಿದ್ದು ಸರಿಯಲ್ಲ. ಎಲ್ಲ ಸ್ವಾಮೀಜಿಗಳು ಈ ಬಗ್ಗೆ ದ್ವನಿ ಎತ್ತಿದ್ದಾರೆ. ಸರ್ಕಾರ ಕೂಡಲೇ ಬಸವಣ್ಣನವರ ಪಠ್ಯವನ್ನು ಸರಿಪಡಿಸಬೇಕು ಎಂದು ಬಸವಜಯ ಮೃತ್ಯುಂಜಯಸ್ವಾಮೀಜಿ ಒತ್ತಾಯಿಸಿದರು.
ವರದಿ: ಆಂಟೋನಿ, ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


