ಚಿತ್ರದುರ್ಗ: ಚಿತ್ರದುರ್ಗ ಗೊಲ್ಲಗಿರಿ ಮಠದ ಯಾದವಾನಂದಶ್ರೀಗಳು ಜಿಲ್ಲೆಯದಾದ್ಯಂತ ದಶಕಗಳಿಂದ ಎಸ್ಟಿ ಮೀಸಲಾತಿ ಹೋರಾಟ ನಡೆಸಿಕೊಂಡು ಬರುತ್ತಿರುವ ಕಾಡುಗೊಲ್ಲರ ಹೋರಾಟದ ನೇತೃತ್ವವಹಿಸಲಿ, ಇಲ್ಲವಾದರೆ ಮಠದ ಪೀಠತ್ಯಾಗ ಮಾಡಲು ಸಿದ್ಧರಾಗಿ ಎಂದು ಕಾಡುಗೊಲ್ಲ ಮುಖಂಡರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಕಾಡುಗೊಲ್ಲ ಒಳಪಂಗಡ ಮೀಸಲಾತಿ ಬೆಂಬಲವಿಲ್ಲ ಎಂಬ ಶ್ರೀಗಳ ಹೇಳಿಕೆಯನ್ನು ಖಂಡಿಸಿ, ಹಿರಿಯೂರು ನಗರದ ಪ್ರವಾಸಿ ಮಂದಿರದಲ್ಲಿ ಕಾಡುಗೊಲ್ಲ ಮುಖಂಡರು ನಡೆಸಿದ ಸಭೆಯಲ್ಲಿ ಈ ಆಗ್ರಹ ಕೇಳಿ ಬಂದಿದೆ.
ಕಾಡುಗೊಲ್ಲ ಸಮಾಜ ಒಂದು ಉಪಜಾತಿಯಲ್ಲ, ಪ್ರತ್ಯೇಕ ಅಸ್ಮಿತೆ ಹೊಂದಿರುವ ಜಾತಿಯಾಗಿದ್ದು, ನಾವು ಒಳಮೀಸಲಾತಿ ಕೇಳುತ್ತಿಲ್ಲ, ಕಾಡುಗೊಲ್ಲರೇ ಬೇರೆ, ಊರುಗೊಲ್ಲರೇ ಬೇರೆಯಾಗಿದ್ದು ನಮ್ಮ ಆಚರಣೆಗೂ ಅವರ ಆಚರಣೆಗಳಿಗೆ ಬಹಳ ವ್ಯತ್ಯಾಸವಿದೆ. ಇದನ್ನು ಸ್ವಾಮೀಜಿಯವರು ಅರ್ಥಮಾಡಿಕೊಳ್ಳಬೇಕು ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಮಧ್ಯ ಕರ್ನಾಟಕದಲ್ಲಿ ಕಾಡುಗೊಲ್ಲರು ಹೆಚ್ಚಾಗಿ ಇರುವುದರಿಂದ ಮುರುಘಾ ಶರಣರು ಜಾಗವನ್ನು ನೀಡಿ ಮಠ ಸ್ಥಾಪನೆಗೆ ಕೈಜೋಡಿಸಿದರು. ಕಾಡುಗೊಲ್ಲರು ದೇಣಿಗೆ ಸಂಗ್ರಹಿಸಿ ಯಾದವಾನಂದ ಸ್ವಾಮೀಜಿಗೆ ಪಟ್ಟವನ್ನು ಕಟ್ಟಲಾಯಿತು. ಎ. ಕೃಷ್ಣಪ್ಪ ಆಗಲಿ, ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಆಗಲಿ ನಿಮ್ಮನ್ನು ಆಯ್ಕಮಾಡಿಲ್ಲ. ತಾವುಗಳು ಕಾಡುಗೊಲ್ಲ ಮಹಿಳೆಯ ಹೊಟ್ಟೆಯಲ್ಲಿ ಹುಟ್ಟಿದ ಕಾಡುಗೊಲ್ಲ ಸಮಾಜ ಶ್ರೀಗಳಾಗಿದ್ದೀರಿ, ಮಾಗಡಿಯಲ್ಲಿ ಆತ್ಮ ಸಾಕ್ಷಿಗೆ ವಿರುದ್ಧವಾಗಿ ಹೇಳಿಕೆ ನೀಡಿ ಮಾಧ್ಯಮಗಳ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಆ ಹೇಳಿಕೆಯನ್ನು ಹಿಂಪಡೆದು ಮೀಸಲಾತಿ ಹೋರಾಟದ ಮುಂದಾಳತ್ವ ವಹಿಸಕೊಳ್ಳಬೇಕು. ಇಲ್ಲವೇ ಪೀಠ ತ್ಯಾಗ ಮಾಡಲು ಸಿದ್ಧರಾಗಬೇಕು ಎಂದು ಅವರು ಒತ್ತಾಯಿಸಿದರು.
ಕಳೆದ ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಮಾಧುಸ್ವಾಮಿ, ಶಾಸಕರಾದ ಡಾ. ರಂಗನಾಥ್, ಶಿವಲಿಂಗೇಗೌಡ ಅವರು ಕಾಡುಗೊಲ್ಲರ ಬಗ್ಗೆ ಸಾಕಷ್ಟು ವಿಚಾರ ತಿಳಿದು ಮೀಸಲಾತಿಗೆ ಸೇರ್ಪಡೆ ಮಾಡುವಂತೆ ಪ್ರಸ್ತಾಪ ಮಾಡಿದ್ದಾರೆ. ಇಂತಹ ಸನ್ನಿವೇಶದಲ್ಲಿ ನಮ್ಮ ಸಮುದಾಯದ ಸ್ವಾಮೀಜಿಯವರು ಇಂತಹ ಅವಹೇಳನಕಾರಿ ಹೇಳಿಕೆ ನೀಡುವ ಜೊತೆಗೆ ಕಾಡುಗೊಲ್ಲ ಎಂಬ ಪದ ಪೀಡೆ ಎಂದಿರುವುದು ಮನಸಿಗೆ ನೋವುಂಟು ಮಾಡಿದೆ ಎಂದರು.
ಕಾಡುಗೊಲ್ಲ ಪೀಡೆ ಪದವಾದರೆ, ನಮ್ಮ ಸಹೋದರಿ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ನೀವು, ನಿಮ್ಮ ತಾಯಿ ಪೀಡೆಯಾಗಿದ್ದರಾ? ಎಂದು ಶ್ರೀಗಳನ್ನು ಪ್ರಶ್ನಿಸಿದರಲ್ಲದೇ, ಇನ್ನಾದರೂ ದಯಮಾಡಿ ಶ್ರೀಗಳು ಮಾತನಾಡುವಾಗ ಯೋಚನೆ ಮಾಡಿ ಮಾತನಾಡಬೇಕು. ಬಾಯಿಗೆ ಬಂದಂತೆ ಮಾತಾಡಬಾರದು. ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರ ಪ್ರಯತ್ನದಿಂದ ನಮಗೆ ಮೀಸಲಾತಿ ದೊರೆಯುತ್ತದೆ. ಸ್ವಾಮೀಜಿಯವರು ಹಾಡಿರುವ ಮಾತನ್ನು ವಾಪಸ್ ಪಡೆಯಬೇಕು ಎಂದು ಮುಖಂಡರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕಾಡುಗೊಲ್ಲ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಸಿ. ಶಿವು ಯಾದವ್, ಮಾಜಿ ಜಿಪಂ ಸದಸ್ಯ ಸಿಬಿ. ಪಾಪಣ್ಣ, ಮುಖಂಡರಾದ ಪಾತಣ್ಣ, ಕೂಡ್ಲಹಳ್ಳಿ ಚಿದಾನಂದ್, ಎಸ್. ಆರ್. ತಿಪ್ಪೇಸ್ವಾಮಿ, ಕರಿಯಣ್ಣ, ತಮ್ಮಣ್ಣ, ಮಹಾಲಿಂಗಪ್ಪ, ಮೂಡಲಗಿರಿಯಪ್ಪ, ಎಜಿ. ತಿಮ್ಮಯ್ಯ, ನಿವೃತ್ತ ಶಿಕ್ಷಕ ನಾಗಪ್ಪ, ಚಿತ್ರಜಿತ್ ಯಾದವ್, ಬಿಡಿ ಬಸವರಾಜ್, ಪಿ.ಆರ್. ದಾಸ್, ಅಧ್ಯಕ್ಷ ರಂಗಪ್ಪ, ಸಂಪತ್, ಕೃಷ್ಣ ಪೂಜಾರ್, ಗೋಪಿ ಯಾದವ್, ಮಂಜುನಾಥ್, ವಿದ್ಯಾಧರ, ತಿಮ್ಮಯ್ಯ, ಮಂಜುನಾಥ್, ಚಂದ್ರಹಾಸ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ವರದಿ : ಮುರುಳಿಧರನ್ ಆರ್. ಚಿತ್ರದುರ್ಗ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz