ಚಿಕ್ಕಮಗಳೂರು: ಪರಿಸರ ಮಾಲಿನ್ಯ ಉಂಟಾದರೆ ಮುಂಬರುವ ದಿನಗಳಲ್ಲಿ ಆಮ್ಲ ಜನಕವನ್ನು ಹಾಗೂ ಪ್ರಕೃತಿದತ್ತವಾಗಿ ಸಿಗುವುದೆಲ್ಲವನ್ನು ಕೊಂಡುಕೊಳ್ಳಬಹುದಾದ ಪರಿಸ್ಥಿತಿ ಎದುರಾಗಲಿದೆ ಎಂದು ಜಿಲ್ಲಾ ಮಾಲಿನ್ಯ ನಿಯಂತ್ರಣಾಧಿಕಾರಿ ವೈ.ಎಸ್. ರಾಧಾ ಹೇಳಿದರು.
ನಗರದ ಬೈಪಾಸ್ ಸಮೀಪ ಎಂಇಎಸ್ ಎಸ್.ಎಸ್.ಆರ್. ಪ್ರಾಯೋಗಿಕ ಪ್ರೌಢಶಾಲೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತ, ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ ಹಾಗೂ ಜಿಲ್ಲಾ ವಿಜ್ಞಾನ ಪರಿಷತ್ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಅತಿಯಾದ ಜನಸಂಖ್ಯೆಯಿಂದಾಗಿ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಅಪಾರ ಪರಿಸರವನ್ನು ನಾಶ ಮಾಡಲಾಗುತ್ತಿದೆ. ಇದರಿಂದ ಉತ್ತಮವಾದ ಆಮ್ಲಜನಕ ಸಿಗುತ್ತಿಲ್ಲ. ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದರು.
ವಿದ್ಯಾರ್ಥಿಗಳು ಭೂಮಿಯನ್ನು ಉಳಿಸಿಕೊಳ್ಳಬೇಕಾದರೆ ಗಿಡಗಳನ್ನು ನೆಡಬೇಕು. ನಿಮ್ಮ ಎಲ್ಲಾ ಆಚರಣೆಗಳಿಗೆ ಉಡುಗೊರೆಯಾಗಿ ಗಿಡಗಳನ್ನು ಕೊಡಿ ಮತ್ತು ಮನೆಯಂಗಳದಿ ಸಸಿ ನೆಡುವ ಮೂಲಕ ಪೋಷಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ವಿಜ್ಞಾನ ಪರಿಷತ್ ಅಧ್ಯಕ್ಷ ಸತ್ಯನಾರಾಯಣ್ ಪ್ರಾಸ್ತಾವಿಕವಾಗಿ ಮಾತನಾಡಿ, ಪರಿಸರ ಕಾಳಜಿ ಇದ್ದರೆ ಮಾತ್ರ ಪರಿಸರವನ್ನು ವನದಲ್ಲಿ ಕಾಣಲು ಸಾಧ್ಯ. ಮನೆಗೊಂದು ಮರ, ಊರಿಗೊಂದು ವನ ನಿರ್ಮಾಣ ಮಾಡಲು ಬಾಲ್ಯದಿಂದಲೇ ಆಸಕ್ತಿ ಹೊಂದಬೇಕು. ಸ್ವಇಚ್ಛೆಯಿಂದ ಸಸಿಗಳನ್ನು ನೆಟ್ಟಿ ಪೋಷಿಸ ಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಯೋಗಿಕ ಶಾಲೆಯ ಮುಖ್ಯ ಶಿಕ್ಷಕ ಅರ್ಜುನ್ ಪವರ್ ಮಾತ ನಾಡಿ, ಇತ್ತೀಚೆಗೆ ವಿದ್ಯಾರ್ಥಿಗಳು ಆನ್ ಲೈನ್ ಅಥವಾ ಮೊಬೈಲ್ ಗಳಿಗೆ ದಾಸರಾಗಿದ್ದು ಈ ರೀತಿಯ ಆಟೋಟಗಳು ಆರೋಗ್ಯಕ್ಕೆ ಹಾನಿಕಾರಕ. ಇವುಗಳಿಂದ ಹೊರಬಂದು ಭೂಮಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪಠ್ಯ ದ ಜೊತೆಗೆ ಪರಿಸರ ಬಗ್ಗೆ ಹೆಚ್ಚು ಕಾಳಜಿ ಹೊಂದಬೇಕು ಎಂದು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಿಜ್ಞಾನ ಪರಿಷತ್ ಉಪಾಧ್ಯಕ್ಷ ಓಂಕಾರಪ್ಪ, ಖಜಾಂಚಿ ಸದಾಶಿವಮೂ ರ್ತಿ ಉಪಸ್ಥಿತರಿದ್ದರು. ಶಿಕ್ಷಕ ಹೆಚ್.ಎನ್.ಸತೀಶ್ ಸ್ವಾಗತಿಸಿದರು. ವಿದ್ಯಾರ್ಥಿನಿ ರಕ್ಷಿತಾ ಪ್ರಾರ್ಥಿಸಿದರು. ಶಿಕ್ಷಕ ಬಿ.ಎಲ್. ಜಗದೀಶ್ ನಿರೂಪಿಸಿದರು. ವಿಜ್ಞಾನ ಪರಿಷತ್ ಸಹ ಕಾರ್ಯದರ್ಶಿ ಎಸ್.ಬಿ. ಪ್ರಶಾಂತ್ ವಂದಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


