ಚಿಕ್ಕಬಳ್ಳಾಪುರ: ಕೆಂಪೇಗೌಡ ಜಯಂತಿ ಆಚರಣೆಯ ವೇಳೆ ನಡೆದ ಚಪ್ಪಲಿ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ಇಂದು ಹಿರಿಯ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ತಮಗಾದ ಅವಮಾನವನ್ನು ನೆನೆದು ಕಣ್ಣೀರು ಹಾಕಿದ್ದಾರೆ.
ಇತ್ತೀಚೆಗೆ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದ ವೇಳೆ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಶಾಸಕ ಪ್ರದೀಪ್ ಈಶ್ವರ್ ಅವರ ಮೇಲೆ ಚಪ್ಪಲಿ ಎಸೆದು, ಅವರ ಕುಟುಂಬದವರನ್ನು ಕೀಳಾಗಿ ನಿಂದಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಶಾಸಕರು, ಅಂದು ನಡೆದ ಸಂಪೂರ್ಣ ಘಟನೆಯನ್ನು ವಿವರಿಸಿ ತೀವ್ರ ಭಾವುಕರಾದರು.
ಪ್ರದೀಪ್ ಈಶ್ವರ್ ಅವರ ನೋವನ್ನು ಆಲಿಸಿದ ಸಿದ್ದರಾಮಯ್ಯ ಅವರು, “ರಾಜಕಾರಣದಲ್ಲಿ ಇಂತಹ ಘಟನೆಗಳು ಸಾಮಾನ್ಯ. ಇದಕ್ಕೆ ಧೃತಿಗೆಡದೆ, ಇಲ್ಲೇ ಇದ್ದು ಇಂತಹ ಸವಾಲುಗಳನ್ನು ಎದುರಿಸಬೇಕು. ಇಡೀ ಪಕ್ಷ ಮತ್ತು ನಾವು ನಿಮ್ಮೊಂದಿಗಿದ್ದೇವೆ” ಎಂದು ಧೈರ್ಯ ತುಂಬಿದ್ದಾರೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಿದ್ದರಾಮಯ್ಯ ಅವರು, ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ದೂರವಾಣಿ ಕರೆ ಮಾಡಿ ಸೂಕ್ತ ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ಪೊಲೀಸರ ಸಮ್ಮುಖದಲ್ಲೇ ಆಡಳಿತ ಪಕ್ಷದ ಶಾಸಕನಿಗೆ ಈ ರೀತಿಯಾಗಿರುವುದು ಅಕ್ಷಮ್ಯ ಅಪರಾಧವಾಗಿದ್ದು, ಕರ್ತವ್ಯ ಲೋಪ ಎಸಗಿದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದಿಢೀರ್ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC




