ತುರುವೇಕೆರೆ: “ನಮ್ಮ ತಾಲೂಕಿನ ಜನಪ್ರಿಯ ಶಾಸಕರಾದ ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್. ಶ್ರೀನಿವಾಸ್ ರವರು ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ನಮ್ಮ ಪಕ್ಷದ ಪರವಾಗಿ ಹಾಗೂ ವೈಯಕ್ತಿಕವಾಗಿ ಖಂಡಿಸುತ್ತೇನೆ. ನಾನು ನಿಮಗೆ ನೇರವಾಗಿ ಪ್ರಶ್ನೆ ಮಾಡುತ್ತೇನೆ. ನಮ್ಮ ಶಾಸಕರು ನಿಮ್ಮನ್ನು ಎಲ್ಲಿ ಕಳ್ಳ ಎಂದು ಹೇಳಿಕೆಯನ್ನು ನೀಡಿದ್ದಾರೆ? ತಮ್ಮಲ್ಲಿ ಆಡಿಯೋ ಅಥವಾ ವಿಡಿಯೋ ತುಣುಕುಗಳಿದ್ದರೆ ಬಹಿರಂಗಪಡಿಸಿ” ಎಂದು ತುರುವೇಕೆರೆ ತಾಲೂಕು ಜೆಡಿಎಸ್ ಪಕ್ಷದ ವಕ್ತಾರ ವೆಂಕಟಾಪುರ ಯೋಗೀಶ್ ತುರುವೇಕೆರೆ ಕ್ಷೇತ್ರದ ಶಾಸಕ ಶ್ರೀನಿವಾಸ ವಿರುದ್ಧ ಕಿಡಿಕಾರಿದರು.
ಪಟ್ಟಣದ ದಬ್ಬೆಘಟ್ಟ ರಸ್ತೆಯಲ್ಲಿರುವ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಘೋಷ್ಠಿಯಲ್ಲಿ ಮಾತನಾಡಿ, “ತಾಕತ್ತಿದ್ದರೆ ಗುಬ್ಬಿಗೆ ಬನ್ನಿ ನಿಮ್ಮ ಕೊರಳಪಟ್ಟಿ ಹಿಡಿದು ಎಳೆದುಕೊಳ್ಳುತ್ತೇನೆ ಮತ್ತು ಕೃಷ್ಣಪ್ಪನವರ ಗಂಡಸ್ತನದ ಬಗ್ಗೆ ಮಾಧ್ಯಮದ ಪ್ರತಿನಿಧಿಗಳ ಮುಂದೆ ಪ್ರಶ್ನೆ ಮಾಡಿದ್ದೀರಿ. ಕೃಷ್ಣಪ್ಪನವರ ಗಂಡಸ್ತನ ಏನು ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ. ನಿಮಗೆ ತಾಕತ್ತಿದ್ದರೆ ಕೃಷ್ಣಪ್ಪನವರ ಒಂದು ರೋಮ ಮುಟ್ಟಿ ಸಾಕು. ಮುಂದೆ ರಾಜ್ಯದಲ್ಲಿ ಯಾವ ರೀತಿಯ ಪರಿಣಾಮವಾಗುತ್ತದೆ ಎಂದು ನೋಡಿ.
ವಾಸುರವರೆ ನೀವೇ ವೇಳೆ, ಜಾಗ ಎಲ್ಲವನ್ನು ಗೊತ್ತು ಮಾಡಿ ಆ ಜಾಗಕ್ಕೆ ನಾವು ಬರುತ್ತೇವೆ. ಮುಂದಿನ ಪರಿಣಾಮವನ್ನು ಕೂಡ ನೀವು ಎದುರಿಸಬೇಕಾಗುತ್ತದೆ. ಸಂಸದ ಜಿ.ಎಸ್. ಬಸವರಾಜ್ ಅವರ ಬಗ್ಗೆ ಮಾತನಾಡಿದ ಹಾಗೆ, ರಾಯಸಂದ್ರ ರವಿ ಅವರ ಮೇಲೆ ಹಲ್ಲೆ ಮಾಡಿದ ಹಾಗೆ, ಅನ್ನೋದನ್ನ ಮರೆತುಬಿಡಿ. ನಿಮಗೆ ಮಾಧ್ಯಮದ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ. ಇನ್ನೊಮ್ಮೆ ಈ ರೀತಿ ನಮ್ಮ ನಾಯಕರ ಬಗ್ಗೆ ಮಾತನಾಡಬೇಡಿ” ಎಂದು ಎಚ್ಚರಿಸಿದರು.
“ಜೆಡಿಎಸ್ ಕಾರ್ಯಕರ್ತರು ಯಾರು ಬಳೆ ತೊಟ್ಟು ಕೊಂಡಿಲ್ಲ. ಎಲ್ಲದಕ್ಕೂ ನಾವು ಕೂಡ ಸಿದ್ದರಿದ್ದೇವೆ. ನಮ್ಮ ಶಾಸಕರು ಹೋರಾಟದಿಂದ ಬಂದವರು ಎಂದು ನಿಮಗೂ ತಿಳಿದಿದೆ. ಇಡೀ ರಾಜ್ಯದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಕಾಯಕಲ್ಪ ತಂದುಕೊಟ್ಟಿದ್ದಾರೆ. ಈ ಕ್ಷೇತ್ರದ ಶಾಸಕರನ್ನಾಗಿ ನಾವು ಅವರನ್ನು ಪಡೆದದ್ದು ನಮ್ಮ ಪುಣ್ಯ. ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರೆ ಪರಿಣಾಮ ನೆಟ್ಟಗಿರಲ್ಲ” ಎಂದು ಹೇಳಿ, ಇದು ನಿಮಗೆ ಎಚ್ಚರಿಕೆಯ ಗಂಟೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷರಾದ ದೊಡ್ಡೇಗೌಡ, ಎಚ್.ಆರ್. ರಾಮೇಗೌಡರು, ತಿಮ್ಮೇಗೌಡ ಬಡಾವಣೆ ಶಿವರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296