ಕಾಫಿನಾಡು ಚಿಕ್ಕಮಗಳೂರಿನಲ್ಲಿ ಭಾರಿ ಸದ್ದು ಮಾಡಿದ್ದ ಲವ್ ಜಿಹಾದ್ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ನಾನೇ ಮುಸ್ಲಿಂ ಯುವಕನನ್ನು ಇಷ್ಟಪಟ್ಟು ಮದುವೆಯಾಗುತ್ತಿದ್ದು, ಆ ಧರ್ಮಕ್ಕೆ ಮತಾಂತರಗೊಳ್ಳುತ್ತೇನೆ. ಅದು ನನ್ನ ಹಕ್ಕು, ಸ್ವಾತಂತ್ರ್ಯ. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದು ಮದುವೆಗೆ ಅಡ್ಡಿಪಡಿಸಿದವರಿಗೆ ಹಿಂದೂ ಯುವತಿ ಚೈತ್ರಾ ತಿರುಗೇಟು ಕೊಟ್ಟಿದ್ದಾಳೆ.
ನಾವು ಪ್ರೀತಿಸಿಯೇ ಮದುವೆ ಆಗುತ್ತಿದ್ದೇನೆ, ಮುಂದೆಯೂ ಚೆನ್ನಾಗಿರುತ್ತೇವೆ ಎಂದು ಹಿಂದೂ ಪರ ಸಂಘಟನೆ ಕಾರ್ಯಕರ್ತರಿಗೆ ಯುವತಿ ತಿರುಗೇಟು ನೀಡಿದ್ದಾಳೆ. ನನ್ನ ಗಂಡನ ಮೇಲೆ ಹಲ್ಲೆ ಮಾಡಿದ್ದಾರೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪೊಲೀಸರ ವಿರುದ್ಧವೂ ಕಿಡಿಕಾರಿದ್ದಾಳೆ.
ಸೆಪ್ಟೆಂಬರ್ 14ರಂದು ಸಂಜೆ ಚಿಕ್ಕಮಗಳೂರು ನಗರದಲ್ಲಿ ಲವ್ ಜಿಹಾದ್ ಆರೋಪದ ಬಿಸಿಯ ತಾಪ ಏರಿತ್ತು. ಮುಸ್ಲಿಂ ಹುಡುಗ-ಹಿಂದೂ ಹುಡುಗಿ ಮದುವೆ ಆಗುವ ವಿಷಯ ತಿಳಿದು ಹಿಂದೂಪರ ಸಂಘಟನೆ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು. ಪೊಲೀಸರೂ ಎಲ್ಲರನ್ನೂ ಠಾಣೆಗೆ ಕರೆದೊಯ್ದಿದ್ದರು. ನೈತಿಕ ಪೊಲೀಸ್ ಗಿರಿಯ ಆರೋಪದಡಿ ಹಿಂದೂ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿದ್ದರು.
ಹುಡುಗ-ಹುಡುಗಿ ಇಬ್ಬರೂ ಮೇಜರ್ ಆದ ಕಾರಣ ಪ್ರಕರಣವನ್ನ ಅಲ್ಲಿಗೆ ತಡೆದಿದ್ದರು. ಸ್ಥಳಕ್ಕೆ ಬಂದ ಹುಡುಗಿ ತಾಯಿ ಕೂಡ ಅವನೇ ನನ್ನ ಅಳಿಯ ಎಂದಿದ್ದರು. ಆದರೆ ಇಂದು ಮಾಧ್ಯಮಗಳ ಮುಂದೆ ಬಂದ ನವಜೋಡಿ ಮದುವೆ ಆಗುವುದು ನಮ್ಮ ಇಷ್ಟ. ಪ್ರಶ್ನಿಸುವುದಕ್ಕೆ ಅವರು ಯಾರು ಎಂದು ಹಿಂದೂಪರ ಸಂಘಟನೆಗಳ ವಿರುದ್ಧ ಕಿಡಿಕಾರಿದ್ದಾರೆ. ನಾವು ಮೂರು ವರ್ಷದಿಂದ ಪ್ರೀತಿಸುತ್ತಿದ್ದು, ಮದುವೆ ಆಗುತ್ತೇವೆ ಎಂದು ಕಿಡಿಕಾರಿದ್ದಾರೆ.
ನನ್ನ ಗಂಡ ಯಾವ ಹೆಸರಿಡುತ್ತಾನೋ ಅದೇ ಹೆಸರಿನಲ್ಲಿ ಇರುತ್ತೇನೆ. ಅದು ನನ್ನ ಹಕ್ಕು-ಸ್ವಾತಂತ್ರ್ಯ. ನಾವು ಒಬ್ಬರನೊಬ್ಬರು ಮೆಚ್ಚಿ ಮದುವೆ ಆಗುವ ವೇಳೆ ಸಬ್ ರಿಜಿಸ್ಟ್ರಾರ್ ಕಚೇರಿಗೆ ಬಂದ ಹಿಂದೂಪರ ಸಂಘಟನೆ ಕಾರ್ಯಕರ್ತರು ನನ್ನ ಗಂಡನ ಮೇಲೆ ಹಲ್ಲೆ ಮಾಡಿದ್ದಾರೆ. ಹೊಡೆಯುವುದಕೆ ಅವರು ಯಾರು? ಎಂದು ಪ್ರಶ್ನಿಸುವ ಮೂಲಕ ಕಿಡಿಕಾರಿದ್ದಾರೆ.
ನನ್ನ ಗಂಡನಿಗೆ ಹಿಂದೂ ಹುಡುಗಿ ಬೇಕಾ, ಎಸ್ಸಿ ಹುಡುಗಿ ಬೇಕಾ ಎಂದು ಹಲ್ಲೆ ಮಾಡಿದ್ದಾರೆ. ಎಸ್ಸಿ ಹುಡುಗಿಯನ್ನು ಮದುವೆ ಆಗಬಾರದಾ? ಎಂದು ಚೈತ್ರಾ ಪ್ರಶ್ನಿಸಿದ್ದಾಳೆ. ಜೀವ ಬೆದರಿಕೆ ಇದೆ, ನಮಗೆ ರಕ್ಷಣೆ ಬೇಕು ಎಂದು ಕೋರಿದ್ದಾಳೆ. ನಮ್ಮ ಮೇಲೆ ಹಲ್ಲೆ ಮಾಡಿದರೂ ಪೊಲೀಸರು ಅವರಿಗೆ ಬೇಲ್ ಕೊಟ್ಟು ಕಳಿಸಿದ್ದಾರೆ. ನನ್ನನ್ನು ಅಂದು ಮನೆಗೆ ಕಳಿಸಲಿಲ್ಲ. ಭಜರಂಗದಳದವರು ಏನಾದರೂ ಮಾಡುತ್ತಾರೆ ಎಂದು ನನ್ನನ್ನು ಮಹಿಳಾ ಸಂತ್ವನ ಕೇಂದ್ರಕ್ಕೆ ಕಳಿಸಿದ್ದಾರೆ. ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪೊಲೀಸರ ವಿರುದ್ಧವೂ ಅಸಮಾಧಾನ ಹೊರಹಾಕಿದ್ದಾರೆ.
ಇನ್ನು ಇಂದು ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆಗೆ ಅರ್ಜಿ ಸಲ್ಲಿಸಿ ಯುವಕ, ಯುವತಿ ಹೂವಿನ ಹಾರ ಬದಲಾಯಿಸಿಕೊಂಡರು. ಸದ್ಯ ಈ ಜೋಡಿ ಬಹಿರಂಗವಾಗಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಲವ್ ಜಿಹಾದ್ ಎಂದು ಆರೋಪಿಸುತ್ತಿದ್ದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸುಮ್ಮನಾಗಿದ್ಧಾರೆ. ಒಟ್ಟಾರೆ ಮದುವೆ ಪ್ರತಿಯೊಬ್ಬರ ಸ್ವ ಇಚ್ಛೆ ಆಗಿದೆ. ಯಾರೂ ಯಾರನ್ನಾದರೂ ಮದುವೆ ಆಗಬಹುದು. ಅದು ಬಲವಂತದ ಮದುವೆ ಆಗಬಾರದು ಅಷ್ಟೆ. ಬಲವಂತದ ಮದುವೆಗೆ ಕಾನೂನಿನಲ್ಲೂ ಅವಕಾಶ ಇಲ್ಲ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy