ಬೆಂಗಳೂರು: ನಾನು ಮಾತ್ರವಲ್ಲ, ನೀವೂ ದ್ರಾವಿಡರೇ ಆಗಿದ್ದೀರಿ. ಈ ಸ್ಪಷ್ಟತೆ ನನಗಿದೆ. ನಾನು ದ್ರಾವಿಡ ಮೂಲವನ್ನು ಉಳಿಸಿಕೊಂಡಿದ್ದೇನೆ, ನೀವು ಮಾತ್ರ ಅಧಿಕಾರದ ದುರಾಸೆಯಿಂದ ಮೂಲವನ್ನು ತೊರೆದು ಪಕ್ಷಾಂತರ ಮಾಡಿದ್ದೀರಿ.
ಬೇಗ ‘ಘರ್ ವಾಪಸಿ” ಆಗಿಬಿಡಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗಳಿಗೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದು, ನೆಹರು ಅವರನ್ನು ಮೋದಿಗೆ ಹೋಲಿಸಲು ಸಾಧ್ಯವೇ ಇಲ್ಲ ಎಂದು ಮತ್ತೆ ಮತ್ತೆ ಹೇಳುತ್ತೇನೆ. ಇಬ್ಬರು ನಾಯಕರ ಸಾಧನೆ ಬಗ್ಗೆ ಮುಕ್ತ ಚರ್ಚೆಗೆ ನೀವು ಸಿದ್ಧ ಇದ್ದರೆ ನಾನೂ ಸಿದ್ಧನಿದ್ದೇನೆ ಎಂದಿದ್ದಾರೆ.
ನನ್ನ ಮಾತಿಗೆ ನೀವು ಖರೀದಿಸಿಟ್ಟಿರುವ ”ಟ್ರೋಲ್ ಗ್ಯಾಂಗ್” ಮೂಲಕ ಉತ್ತರ ಕೊಡಿಸಲು ಹೋಗಬೇಡಿ. ಭಾರತ ಮಾತೆ ತನ್ನ ಭಕ್ತನನ್ನು ಕಳೆದುಕೊಂಡಿದ್ದಾಳೆ, ಶಾಂತಿ ತನ್ನ ರಕ್ಷಕನನ್ನು ಕಳೆದುಕೊಂಡು ಅನಾಥಳಾಗಿದ್ದಾಳೆ, ನಿರಾಶ್ರಿತರು ತನ್ನ ಆಶ್ರಯದಾತನನ್ನು, ಸಾಮಾನ್ಯ ಜನ ತಮ್ಮ ಕಣ್ಮಣಿಯನ್ನು ಕಳೆದುಕೊಂಡಿದ್ದಾರೆ.. ಪರದೆ ಬಿದ್ದಿದೆ -ಹೀಗೆಂದು ನೆಹರು ಸಾವಿಗೆ ಎ.ಬಿ.ವಾಜಪೇಯಿ ಕಂಬನಿ ಮಿಡಿದಿದ್ದನ್ನು ಹಿರಿಯ ಬಿಜೆಪಿ ನಾಯಕರಿಂದ ಕೇಳಿ ತಿಳಿದುಕೊಳ್ಳಿ ಎಂದು ಅವರು ಹೇಳಿದ್ದಾರೆ.
ದೇಶ ವಿಭಜನೆಯ ಗಾಯಕ್ಕೆ ಸೌಹಾರ್ದತೆಯ ಮುಲಾಮು ಹಚ್ಚಿದವರು ಜವಾಹರಲಾಲ ನೆಹರು. ಒಣಗಿದ ಗಾಯಗಳನ್ನು ಕೋಮುದ್ವೇಷದ ಮೂಲಕ ಕೆದಕುತ್ತಾ ಸಾಮಾಜಿಕ ಆರೋಗ್ಯವನ್ನು ಕೆಡಿಸುತ್ತಿರುವವರು ನಿಮ್ಮ ನರೇಂದ್ರ ಮೋದಿ ಅವರು. ಭಾಕ್ರಾ ನಂಗಲ್, ಹಿರಾಕುಡ್, ದಾಮೋದರ ಕಣಿವೆ ಯೋಜನೆಗಳ ಮೂಲಕ ಭಾರತವೆಂಬ ಆಧುನಿಕ ದೇವಾಲಯವನ್ನು ನಿರ್ಮಾಣ ಮಾಡಿದ್ದ ಜವಾಹರಲಾಲ ನೆಹರೂ ಅಭಿವೃದ್ದಿಯ ಮುನ್ನೋಟದಿಂದ ದೇಶ ಕಟ್ಟಿದ್ದರು. ಅವರಿಗೆ ಕಟ್ಟುವುದಷ್ಟೇ ಗೊತ್ತಿತ್ತು, ನಿಮ್ಮ ನರೇಂದ್ರ ಮೋದಿ ಅವರು ಕೆಡವುದನ್ನಷ್ಟೇ ಕಲಿತಿದ್ದಾರೆ ಎಂದು ಅವರು ಕಿಡಿ ಕಾರಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


