ಸರಗೂರು: ತಾಲ್ಲೂಕಿನ ಬಿ ಮಟಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರ್ಣೇಗಾಲ ಗ್ರಾಮದಲ್ಲಿ ತಾಲ್ಲೂಕು ಪಂಚಾಯಿತಿ ವತಿಯಿಂದ ನಿರ್ಮಾಣವಾಗಿರುವ ನೀರಿನ ತೊಂಬೆ ಅತ್ಯಂತ ಕಳಪೆ ಗುಣಮಟ್ಟ ಹೊಂದಿದ್ದು, ಇದರಿಂದಾಗಿ ಗ್ರಾಮಸ್ಥರು ನೀರಿನ ಸಮಸ್ಯೆಯಿಂದ ಕಂಗೆಟ್ಟಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಸುರೇಶ್ ಎಂಬುವರು ಈ ಸಂಬಂಧ ನಮ್ಮತುಮಕೂರು ಮಾಧ್ಯಮದ ಜೊತೆಗೆ ಮಾತನಾಡಿ, ಸುಮಾರು ಒಂದು ವರ್ಷದ ಹಿಂದೆ ಕಾಮಗಾರಿ ಆರಂಭ ಮಾಡಲಾಗಿದ್ದು, ಇನ್ನೂ ಪೂರ್ಣಗೊಂಡಿಲ್ಲ. ಅಲ್ಲದೇ ಇಲ್ಲಿ ಕಳಪೆ ಕಾಮಗಾರಿ ನಡೆಸಲಾಗಿದ್ದು, ಅಧಿಕಾರಿಗಳು ತಮಗೆ ಇಷ್ಟ ಬಂದಂತೆ ಕೆಲಸ ನಿರ್ವಹಿಸಿ ಹೋಗಿದ್ದಾರೆ . ಹೀಗಾಗಿ ಒಂದು ವರ್ಷವಾದರೂ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ ಎಂದು ಆರೋಪಿಸಿದರು.
ಇಂಜಿನಿಯರ್ ನಾಗೇಶ್ ವರಿಗೆ ಕರೆ ಮಾಡಿ ಕೆಲಸ ಬೇಗನೇ ಮುಗಿಸಿ ಕೊಡಿ ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡರೂ ಕೂಡ ಇದರ ಕಡೆಗೆ ಗಮನ ಕೊಡದೇ ನಿರ್ಲಕ್ಷ್ಯವಹಿಸಿದ್ದಾರೆ. ಇದರಿಂದಾಗಿ ಇಲ್ಲಿನ ಗ್ರಾಮದ ಜನರು ನೀರಿಗಾಗಿ ಪರದಾಡುವಂತಾಗಿದೆ. ಕೆಲಸದ ಗುತ್ತಿಗೆ ವಹಿಸಿಕೊಂಡ ಗುತ್ತಿಗೆದಾರರು ಕೆಲಸವನ್ನು ಮುಗಿಸದೇ ಇದ್ದರೂ, ಅಧಿಕಾರಿಗಳು ಬಿಲ್ ಮಾಡಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮದಲ್ಲಿ ಜಲ ಕ್ಷಾಮ ತಲೆದೋರಿದ್ದು, ಗ್ರಾಮದ ಜನರು ನೀರಿಗಾಗಿ ಸುಮಾರು 2 ಕಿ.ಮೀ ದೂರ ಕಾಡಿನ ಪ್ರದೇಶದಲ್ಲಿ ನಡೆದು ನೀರು ತರುವಂತಾಗಿದೆ. ಇದರಿಂದಾಗಿ ಗ್ರಾಮದ ಮಹಿಳೆಯರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಈಗಲೇ ಈ ರೀತಿಯ ನೀರಿನ ಸಮಸ್ಯೆ ತಲೆದೋರಿದರೆ, ಬೇಸಿಗೆ ಸಮಯದಲ್ಲಿ ನಮ್ಮ ಗತಿ ಏನು ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
ಈ ಸಂದರ್ಭದಲ್ಲಿ ಕದಸಂಸ ತಾಲ್ಲೂಕು ಸಂಘಟನೆ ಸಂಚಾಲಕರಾದ ಗೋವಿಂದರಾಜು ಕೂಡಿಗಿ, ಸುರೇಶ್, ಸಿದ್ದು ಮೊದಲಾದವರು ಇದ್ದರು.
ವರದಿ.ಚಂದ್ರಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy