ತುಮಕೂರು: ಪಠ್ಯಪುಸ್ತಕ ಪರಿಷ್ಕರಣೆಗೆ ವಿರೋಧ ವ್ಯಕ್ತಪಡಿಸಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನಿವಾಸದ ಮುಂದೆ ಪ್ರತಿಭಟಿಸಿ ಆರೆಸ್ಸೆಸ್ ಚಡ್ಡಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಎನ್ ಎಸ್ ಯುಐ ಕಾರ್ಯಕರ್ತರನ್ನು ಬಿಡುಗಡೆಗೊಳಿಸಲಾಗಿದೆ.
ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ, ಕುವೆಂಪು ಅವರಿಗೆ ಪಠ್ಯಪುಸ್ತಕದಲ್ಲಿ ಅವಮಾನ ಮಾಡಿರುವುದನ್ನು ವಿರೋಧಿಸಿದ್ದ ಎನ್ ಎಸ್ ಯುಐ ಶಿಕ್ಷಣ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸಿತ್ತು. ಈ ವೇಳೆ ಬಿ.ಸಿ.ನಾಗೇಶ್ ಮನೆ ಮುಂದೆ ವಿದ್ಯಾರ್ಥಿಗಳು ಚಡ್ಡಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು.
ಪ್ರತಿಭಟನೆಯ ವೇಳೆ ಬಂಧನಕ್ಕೊಳಗಾಗಿದ್ದ ವಿದ್ಯಾರ್ಥಿಗಳನ್ನು 9 ದಿನಗಳ ಬಳಿಕ ಇಂದು ಬಿಡುಗಡೆಗೊಳಿಸಲಾಗಿದೆ. ವಿದ್ಯಾರ್ಥಿಗಳ ಬಿಡುಗಡೆಗಾಗಿ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷ ಪ್ರತಿಭಟನೆ ನಡೆಸಿತ್ತು.
ಬಿಡುಗಡೆಯ ಬಳಿಕ ಮಾತನಾಡಿದ ಎನ್ ಎಸ್ ಯುಐ ರಾಜ್ಯಾದ್ಯಕ್ಷ ಕೀರ್ತಿ ಗಣೇಶ್, ದೇಶಕ್ಕೋಸ್ಕರ ಹೋರಾಟ ಮಾಡಿ ಜೈಲಿಗೆ ಹೋಗಿದ್ದಕ್ಕೆ ಖುಷಿ ಇದೆ. ಆರೆಸ್ಸೆಸ್ ಮಾತು ಕೇಳಿ ಬಿಜೆಪಿಯವರು ಅಂಬೇಡ್ಕರ್, ಬಸವಣ್ಣ, ಕುವೆಂಪು ವಿಚಾರಗಳನ್ನು ಸುಟ್ಟು ಹಾಕಲು ಪ್ರಯತ್ನಿಸುತ್ತಿತ್ತು. ಹಾಗಾಗಿ ನಾವು ಆರೆಸ್ಸೆಸ್ ಚಡ್ಡಿ ಸುಟ್ಟಿದ್ದೇವೆ ಎಂದು ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


