ಬೆಂಗಳೂರು: ಚನ್ನಪಟ್ಟಣ ಉಪ ಚುನಾವಣೆಯ ಕಣದಲ್ಲಿ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿದ್ದು, ಇತ್ತೀಚೆಗಷ್ಟೇ ಬಿಜೆಪಿ ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಿ.ಪಿ.ಯೋಗೇಶ್ವರ್ ಇದೀಗ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ.
ರಾಮನಗರ ಜಿಲ್ಲಾ ಉಸ್ತುವಾರಿ ಆಗಿರುವ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಿ.ಪಿ.ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಸ್ವಾಗತ ಮಾಡಿದ್ದಾರೆ.
ಸಿ.ಪಿ.ಯೋಗೇಶ್ವರ್ ಅವರನ್ನು ಕಾಂಗ್ರೆಸ್ ಸ್ವಾಗತಿಸಿ ಮಾತನಾಡಿದ ಡಿ.ಕೆ.ಶಿವಕುಮಾರ್, ಇವತ್ತು ಬೆಳಗ್ಗೆ 8 ಗಂಟೆಗೆ ಯೋಗೇಶ್ವರ್ ನನ್ನ ಭೇಟಿ ಮಾಡಿದ್ದರು. ನನ್ನ ರಾಜಕೀಯ ಕಾಂಗ್ರೆಸ್ ಪಕ್ಷದಿಂದ ಶುರುವಾಗಿದೆ, ನಾನು ಕಾಂಗ್ರೆಸ್ ನಲ್ಲಿ ಉಳಿದುಕೊಳ್ಳಬೇಕು ಎಂದರು. ತಕ್ಷಣ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ವಿಚಾರ ತಿಳಿಸಿದೆ, ನಮ್ಮ ಪಕ್ಷದ ನಾಯಕನ ಸಮ್ಮುಖದಲ್ಲಿ ಯೋಗೇಶ್ವರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡಿದ್ದೇವೆ. ಮುಖ್ಯಮಂತ್ರಿಗಳ ಜೊತೆ ವಯಾನಾಡ್ ಗೆ ಹೋಗಬೇಕಿತ್ತು, ತುರ್ತು ಕಾರಣಕ್ಕೆ ನಾನು ವಯಾನಾಡಿಗೆ ಹೋಗುತ್ತಿಲ್ಲ. ಇವತ್ತು ಮರಳಿ ಗೂಡಿಗೆ ಯೋಗೇಶ್ವರ್ ಬಂದಿದ್ದಾರೆ, ಅವರಿಗೆ ಸ್ವಾಗತ ಎಂದ ಹೇಳಿದರು.
ಇಂದು ಟಿಕೆಟ್ ಆಕಾಂಕ್ಷಿಗಳ ಪಟ್ಟಿಯನ್ನು ನಾನು ದೆಹಲಿಗೆ ಹೈಕಮಾಂಡ್ ಅವರಿಗೆ ಕಳುಹಿಸಿಕೊಡುತ್ತಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಅವರೇ ಅಭ್ಯರ್ಥಿಗಳನ್ನು ಘೋಷಣೆ ಮಾಡ್ತಾರೆ. ಅಧಿಕೃತವಾಗಿ ಇಂದು ಸಂಜೆ ಪಟ್ಟಿ ಬಿಡುಗಡೆ ಆಗಲಿದೆ.
ನಾಳೆ ಚನ್ನಪಟ್ಟಣದಲ್ಲಿ ನಾವು ನಾಮಪತ್ರ ಸಲ್ಲಿಕೆ ಮಾಡುತ್ತೇವೆ. ಯೋಗೇಶ್ವರ್ ಅವರು ಕೂಡ ಟಿಕೆಟ್ ಗೆ ಅರ್ಜಿ ಕೊಟ್ಟಿದ್ದಾರೆ, ಅವರ ಹೆಸರಿನೊಂದಿಗೆ ಮತ್ತೊಂದು ಹೆಸರು ಪಟ್ಟಿಯಲ್ಲಿ ಇದೆ. ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿ ಕೊರತೆ ಇರೋದಿಲ್ಲ, ಹೈಕಮಾಂಡ್ ಅವರೇ ಅಭ್ಯರ್ಥಿಗಳನ್ನು ಘೋಷಣೆ ಮಾಡ್ತಾರೆ. ಮೂರು ಸ್ಥಾನಗಳಲ್ಲಿ ನಾವು ಗೆಲುವು ಪಡೆಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296