ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ವಾದ-ವಿವಾದಗಳು ಜೋರಾಗಿಯೇ ಅಬ್ಬರಿಸುತ್ತಿವೆ. ಶಿಕ್ಷಣ ಇಲಾಖೆ ವಿರುದ್ಧ ಸಾಹಿತಿಗಳ ಪಠ್ಯ ವಾಪಸ್ ಸಮರ ಶುರುವಾಗಿದ್ದು, ಸಾಹಿತಿಗಳು ಆತುರದ ನಡೆ ತೋರಿದ್ದಾರೆಯೇ ಎಂಬ ಪ್ರಶ್ನೆಯೂ ಕೇಳಿಬರುತ್ತಿದೆ.
ತಮ್ಮ ಪಠ್ಯ ಪರಿಷ್ಕೃತ ಪುಸ್ತಕದಲ್ಲಿ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತ ಪಡಿಸಿಕೊಳ್ಳದ ಕೆಲವು ಸಾಹಿತಿಗಳು ಇಲ್ಲದೆ ಇರುವ ಪಠ್ಯವನ್ನು ಕೈ ಬಿಡುವಂತೆ ಪತ್ರ ಬರೆದು ಪೇಚಿಗೆ ಸಿಲುಕಿದಂತಾಗಿದೆ.
ಪಠ್ಯ ಕೈಬಿಡಿ ಎಂದು ಪತ್ರ ಬರೆಯುವ ಮುನ್ನವೇ 7 ಸಾಹಿತಿಗಳ ಪಠ್ಯವನ್ನು ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿ ಕೈ ಬಿಟ್ಟಿತ್ತು.
ಈ ಹಿಂದೆ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಸಮಿತಿಯಲ್ಲಿ ಏಳು ಮಂದಿ ಹಿರಿಯ ಸಾಹಿತಿಗಳ ಪಠ್ಯ ಇತ್ತು. ತಮ್ಮ ಪಠ್ಯ ಕೈ ಬಿಟ್ಟಿರುವ ಬಗ್ಗೆ ಮಾಹಿತಿ ತಿಳಿದುಕೊಳ್ಳುವ ಮುನ್ನವೇ ಪಠ್ಯ ವಾಪಸ್ ಗೆ ಸಮರ ಸಾರಿದ್ದರು. ತಮ್ಮ ಪಠ್ಯದ ಬಗ್ಗೆ ಮಾಹಿತಿ ತಿಳಿದುಕೊಳ್ಳದೆ ಸಾಲು ಸಾಲು ಪತ್ರ ಬರೆದು ಪಠ್ಯ ವಾಪಸ್ ಗೆ ಆಗ್ರಹಿಸಿದ್ದೇಕೆ? ಬಿಜೆಪಿಯ, ಕಾಂಗ್ರೆಸ್ ಟೂಲ್ ಕಿಟ್ ಆರೋಪಕ್ಕೆ ಸಾಹಿತಿಗಳ ನಡವಳಿಕೆ ಪುಷ್ಟಿ ನೀಡುತ್ತಿದೆ.ಪರಿಷ್ಕೃತ ಪಠ್ಯವನ್ನೇ ನೋಡದೆ ಪಠ್ಯ ವಾಪಸ್ ಗೆ ಪತ್ರವೇ ಎಂಬ ಪ್ರಶ್ನೆ ಉದ್ಭವಿಸಿದೆ.
ಪಠ್ಯ ವಾಪಸ್‍ಗೆ ಪತ್ರ ಬರೆದ 11 ಜನರಲ್ಲಿ ಕೇವಲ ನಾಲ್ಕು ಸಾಹಿತಿಗಳ ಪಠ್ಯ ಮಾತ್ರ ಇದೆ. ಸಾಹಿತಿಗಳಾದ ದೇವನೂರು ಮಹಾದೇವ, ಜಿ. ರಾಮಕೃಷ್ಣ, ಈರಪ್ಪ ಎಂ.ಕಂಬಳಿ, ರೂಪಾ ಹಾಸನ ಇವರ ಪಠ್ಯಗಳು ಮಾತ್ರ ಪರಿಷ್ಕೃತ ಪಠ್ಯ ಪುಸ್ತಕದಲ್ಲಿವೆ. ಉಳಿದ ಏಳು ಮಂದಿಯ ಪಠ್ಯಗಳೇ ಇಲ್ಲದಿದ್ದರೂ ಪಠ್ಯ ವಾಪಸ್‍ಗೆ ಪತ್ರ ಬರೆದಿದ್ದಾರೆ ಎಂದು ಆರೋಪಿಸಲಾಗಿದೆ.
ಮೂಡ್ನಾಕೂಡು ಚಿನ್ನಸ್ವಾಮಿ, ಬೊಳುವಾರು ಮಹಮದ್ ಕುಂಞ, ಚಂದ್ರಶೇಖರ ತಾಳ್ಯ, ಪಾರ್ವತೀಶ ಬಿಳಿದಾಳೆ, ಡಾ. ಸರಜೂ ಕಾಟ್ಕರ್, ಡಾ.ಎಚ್.ಎಸ್.ಅನುಪಮಾ, ದು. ಸರಸ್ವತಿ ಪಠ್ಯವಿಲ್ಲದೆ ಪತ್ರ ಮಾತ್ರ ಬರೆದಿರುವ ಸಾಹಿತಿಗಳು ಎಂದು ತಿಳಿದುಬಂದಿದೆ.
ವರದಿ: ಆಂಟೋನಿ ಬೇಗೂರು


