ದಾವಣಗೆರೆ: ಪಠ್ಯಪುಸ್ತಕ ಮರು ಪರಿಷ್ಕರಣೆಯ ಸಂಬಂಧ ಉಂಟಾಗಿರುವ ವಿವಾದ ವಿಚಾರವಾಗಿ ಮುಖ್ಯಮಂತ್ರಿ ಗಳು ಮಧ್ಯಪ್ರವೇಶಿಸಿ ಎಲ್ಲ ಗೊಂದಲಗಳಿಗೆ ತೆರೆ ಎಳೆಯಬೇಕು ಎಂದು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಮಾಜಿ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಮನವಿ ಮಾಡಿದ್ದಾರೆ.
ಸುದ್ದಿಗಾರರ ಜೊತೆಗೆ ಭಾನುವಾರ ಮಾತನಾಡಿದ ಅವರು, ಶೈಕ್ಷಣಿಕ ಘನತೆ ಉಳಿಯಬೇಕು ಎಂಬುದು ನನ್ನ ಕಳಕಳಿ. ಹಾಗಾಗಿ ಮುಖ್ಯಮಂತ್ರಿಯವರು ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದರು.
ಶೈಕ್ಷಣಿಕ ಘನತೆ ಉಳಿಯಲು ಮುಖ್ಯಮಂತ್ರಿ ಯವರ ಮಧ್ಯಪ್ರವೇಶ ಅನಿವಾರ್ಯವೂ ಹೌದು. ನಮ್ಮ ಕಾಲದಲ್ಲೂ ಪಠ್ಯಪುಸ್ತಕ ಪರಿಷ್ಕರಣೆ ಆಗಿತ್ತು. ಅದು ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು ಹಾಗೂ ಸಂವಿಧಾನದ ಆಶಯಗಳಿಗೆ ಅನುಗುಣವಾಗಿಯೇ ನಡೆದಿತ್ತು. ಯಾವ ಪಠ್ಯವನ್ನ ಸೇರಿಸಲಾಗಿದೆ, ಬಿಟ್ಟಿದ್ದೇವೆ ಎಂಬುದಕ್ಕೆ ಸ್ಪಷ್ಟ, ನಿರ್ದಿಷ್ಟ ಕಾರಣ ನೀಡಲಾಗಿತ್ತು ಎಂದು ತಿಳಿಸಿದರು.
ಈಗ ಪಠ್ಯಪುಸ್ತಕ ಪರಿಷ್ಕರಣೆ ಆಗಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಹಾಗು ಸಂವಿಧಾನ ಆಶಯಕ್ಕೆ ಪಠ್ಯಪುಸ್ತಕ ರಚನೆ ಆಗಬೇಕು. ಈ ಬಾರಿಯ ಮರು ಪರಿಷ್ಕರಣೆಯಲ್ಲಿ ಅನೇಕ ಮುಖ್ಯ ಪಠ್ಯಗಳು ಕೈಬಿಟ್ಟಿರುವುದರಿಂದ ಕನ್ನಡ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುತ್ತದೆ ಎಂದು ಅವರು ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


