ತೆಲುಗಿನ ಜನ ‘ಪವನ್ ಕಲ್ಯಾಣ್ ರನ್ನು ಗೆಲ್ಲಿಸಲು 14 ವರ್ಷ ತೆಗೆದುಕೊಂಡರು, ನಟ ಉಪೇಂದ್ರರನ್ನು ಗೆಲ್ಲಿಸಲು ಕನ್ನಡಿಗರು ಎಷ್ಟು ವರ್ಷ ತೆಗೆದುಕೊಳ್ಳುತ್ತಾರೋ?’ ಎಂಬ ಸಾಮಾಜಿಕ ಜಾಲತಾಣವೊಂದರಲ್ಲಿನ ಪೋಸ್ಟ್ ನ್ನು ಹಂಚಿಕೊಂಡಿರುವ ನಟ ಉಪೇಂದ್ರ, ತಮ್ಮ ಪಕ್ಷ ‘ಪ್ರಜಾಕೀಯ’ದ ಸಿದ್ದಾಂತ ಬಗ್ಗೆ ಜನರಿಗೆ ಅರ್ಥವಾಗದೇ ಇರುವುದರ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿ ಮರು ಪೋಸ್ಟ್ ಮಾಡಿದ್ದಾರೆ.
ಇನ್ ಸ್ಟಾಗ್ರಾಂನಲ್ಲಿ ತಮ್ಮ ಪೋಸ್ಟ್ ಹಂಚಿಕೊಂಡಿರುವ ಅವರು, “ನನ್ನ ಸೋಲು-ಗೆಲುವಿನ ಬಗ್ಗೆ ತುಂಬಾ ಚಿಂತೆ ಮಾಡುತ್ತಿದೀರಾ?. ಎಂತಹ ನಿಸ್ವಾರ್ಥ, ತ್ಯಾಗ ಮನೋಭಾವ ನಿಮ್ಮದು. ನಿಮ್ಮೆಲ್ಲರ ಪಾದಕ್ಕೆ ಅಡ್ಡಬೀಳುವೆ” ಎಂದು ಉಪೇಂದ್ರ ಗೇಲಿ ಮಾಡಿ ಕುಟುಕಿದ್ದಾರೆ.
ವಾಹ್ ಮೈ ಡಿಯರ್ ಪ್ರಜಾಪ್ರಭುಗಳೇ ವಾಹ್. ನಾನು ಗೆಲ್ಲಬೇಕು ಅಂತ ಅನ್ನಿಸಿದಾಗ ಯಾವುದಾದರೂ ರಾಜಕೀಯ ಪಕ್ಷ ಸೇರಿ ನೀವು ಹೇಳಿದ ಹಾಗೆ ಮಾಡುತ್ತೇನೆ. ಗೆದ್ದೇ ಗೆಲ್ಲುತ್ತೇನೆ. ಮೊದಲು ನೀವು ಗೆಲ್ಲೋದು ಯಾವಾಗ ಅಂತ ನೀವು ಯೋಚನೆ ಮಾಡಿ. ಮುಂದಿನ ಚುನಾವಣೆಯಲ್ಲಿ ನನಗೆ ಕೆಲಸ ಕೊಡುತ್ತಿರಾ ಅಂದ್ರೆ ನಿಲ್ಲುತ್ತೇನೆ. ಆಗಲೂ ನೀವು ಎಮೋಷನಲ್ ಪ್ರಚಾರ ಮಾಡಬೇಕು. ಸಭೆ ಸಮಾರಂಭ ಎಲ್ಲವನ್ನು ಮಾಡಿ. ಕಷ್ಟ ಪಡಿ. ಮುಂದಿನ ಐದು ವರ್ಷ ನೀವೇನು ಬೇಕಾದ್ರೂ ಮಾಡಿಕೊಳ್ಳಿ ನಾನು ಕೇಳಕ್ಕೆ ಬರಲ್ಲ. ಅಂದರೆ….ಉಶ್.. ಏನು ಬರೀಬೇಕೋ ಗೊತ್ತಾಗುತ್ತಿಲ್ಲ. ಈ ದಡ್ಡ ನನ್ನ ಮಗಂಗೆ ಯಾವನಾದ್ರೂ ಇನ್ನು ಮೇಲೆ ಬುದ್ದಿವಂತಾ ಅಂದರೆ ಅಷ್ಟೇ! ಸೆಂದಾಗಿರಕ್ಕಿಲ್ಲಾ ” ಎಂದು ತೀರಾ ಮಾರ್ಮಿಕವಾಗಿ ಬರೆದುಕೊಂಡಿದ್ದಾರೆ.
ಪ್ರಜಾಕೀಯದ ಸಿದ್ಧಾಂತವನ್ನು ಅರ್ಥ ಮಾಡಿಕೊಳ್ಳದೇ ಎಲ್ಲರ ಹಾಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಬೇಕು ಎಂಬ ಸಾಮಾನ್ಯರ ಅಭಿಪ್ರಾಯದ ವಿರುದ್ಧ ಉಪೇಂದ್ರ ಹರಿ ಹಾಯ್ದಿದ್ದಾರೆ.
ಲೋಕಸಭಾ ಚುನಾವಣೆಯ ಜೊತೆಗೆ ನಡೆದ ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷಕ್ಕೆ ಅಭೂತ ಪೂರ್ವ ಫಲಿತಾಂಶ ಬಂದಿತ್ತು. ಇದರ ಬೆನ್ನಲ್ಲೇ ಉಪೇಂದ್ರರ ಪ್ರಜಾಕೀಯ ಪಕ್ಷವನ್ನು ಪವನ್ ಕಲ್ಯಾಣ್‌ರ ಜನಸೇನಾ ಪಕ್ಷಕ್ಕೆ ಹೋಲಿಸಿದ ಅನೇಕ ಜನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಪಕ್ಷ ಬೆಳೆಸುವುದರಲ್ಲಿ ಪವನ್ ಕಲ್ಯಾಣ್ ರಿಗಿದ್ದ ಆಸಕ್ತಿಯನ್ನು ನಟ ಉಪೇಂದ್ರ ತೋರಿಸುತ್ತಿಲ್ಲ ಎನ್ನುವ ವಾದಗಳು ಕೇಳಿಬಂದಿದ್ದವು. ಅದಕ್ಕೆ ಇದೀಗ ಉಪೇಂದ್ರ ಅವರು ಖಾರವಾದ ಉತ್ತರವನ್ನು ನೀಡಿದ್ದಾರೆ.
‘ಸರಿಸುಮಾರು ಐದು ವರ್ಷಗಳ ಹಿಂದೆ, 2018ರಲ್ಲಿ ‘ಉತ್ತಮ ಪ್ರಜಾಕೀಯ ಪಕ್ಷ’ವನ್ನು ಕಟ್ಟಿದ್ದ ಉಪೇಂದ್ರ, 2019 ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಎಲ್ಲ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಪ್ರಜಾಕೀಯ ಪಕ್ಷ ವಿಭಿನ್ನ ಆಲೋಚನೆಗಳೊಂದಿಗೆ ಪ್ರಚಾರ ಗಿಟ್ಟಿಸಿಕೊಂಡಿತ್ತು. ಆದರೆ ಇಲ್ಲಿಯವರೆಗೆ ನಡೆದ ಯಾವುದೇ ಚುನಾವಣೆಯಲ್ಲಿ ಪ್ರಜಾಕೀಯ ಪಕ್ಷದ ಯಾವುದೇ ಅಭ್ಯರ್ಥಿಗೆ ಗೆಲುವು ದಕ್ಕಿಲ್ಲ ಅನ್ನುವುದು ಗಮನಾರ್ಹ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


