ತುಮಕೂರು: ನಗರದ ಹೊರವಲಯದ ಹಿರೇಹಳ್ಳಿ ಕೈಗಾರಿಕಾ ಪ್ರದೇಶ ವ್ಯಾಪ್ತಿಯ ಶಾರದ ಆಗ್ರೋಟೆಕ್ ಕೀಟನಾಶಕ ಉತ್ಪಾದನಾ ಘಟಕದ ಗೋದಾಮಿನಲ್ಲಿ ನಿಯಮ ಉಲ್ಲಂಘಿಸಿ ಲೇಬಲ್ ನಮೂದಿಸಿದ ಮ್ಯಾಂಕೊಜೆಟ್–75% ಡಬ್ಲ್ಯೂ.ಪಿ. ಮತ್ತು ಮೆಲಾಥಿಯಾನ್–5% ಡಿ.ಪಿ. ಸೇರಿ 4353 ಕೆ.ಜಿ. ಕೀಟನಾಶಕವನ್ನು ಉಪ ಕೃಷಿ ನಿರ್ದೇಶಕ ಹಾಗೂ ಕೀಟನಾಶಕ ಪರಿವೀಕ್ಷಕ ಹೆಚ್. ಹುಲಿರಾಜ ಅವರ ತಂಡ ಜಪ್ತಿ ಮಾಡಿದೆ.
ಸೀಬೆ, ಜೋಳ ಮತ್ತು ಮಾವು ಬೆಳೆಗಳಿಗೆ ಮ್ಯಾಂಕೊಜೆಟ್–75% ಡಬ್ಲ್ಯೂ.ಪಿ. ಮತ್ತು ಮೆಲಾಥಿಯಾನ್–5% ಡಿ.ಪಿ. ಕೀಟನಾಶಕವನ್ನು ನಿಷೇಧ ಮಾಡಿದ್ದರೂ ಸಹ ಕೀಟನಾಶಕಗಳನ್ನು ಉತ್ಪಾದಿಸಿ ಮಾರಾಟ ಮಾಡಲು ದಾಸ್ತಾನು ಮಾಡಲಾಗಿದ್ದ 3,22,000 ರೂ. ಮೌಲ್ಯದ ಕೀಟನಾಶಕವನ್ನು ಪಂಚರ ಸಮಕ್ಷಮದಲ್ಲಿ ಮಹಜರ್ ಮೂಲಕ ಜಪ್ತಿ ಮಾಡಲಾಗಿದೆ.
ಕಳೆದ ಬಾರಿ ಕ್ಷೇತ್ರ ಭೇಟಿ ಸಂದರ್ಭದಲ್ಲಿ ಕೀಟನಾಶಕ ಮಾರಾಟ ತಡೆ ಆದೇಶ ಜಾರಿ ಮಾಡಿ ಸಮಜಾಯಿಷಿ ನೀಡಲು ನೋಟೀಸ್ ಮೂಲಕ ತಿಳುವಳಿಕೆ ಪತ್ರ ಜಾರಿ ಮಾಡಲಾಗಿತ್ತು. ಕೀಟನಾಶಕಗಳ ಉತ್ಪಾದಕ ಕಂಪನಿಯು ಸೂಕ್ತ ದಾಖಲಾತಿಗಳ ನಿರ್ವಹಣೆ, ಇಲಾಖೆ ಅನುಮತಿ ಇಲ್ಲದೆ, ಸಮಜಾಯಿಷಿ ನೀಡದಿರುವ ಕಾರಣ ಕೀಟನಾಶಕ ಕಾಯ್ದೆ 1968 & ಕೀಟನಾಶಕ ನಿಯಮಗಳು 1971ರ ಉಲ್ಲಂಘನೆ ಮೇರೆಗೆ ಈ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ದಾಳಿಯಲ್ಲಿ ಕೃಷಿ ಇಲಾಖೆ ಉಪ ನಿರ್ದೇಶಕ ಅಶೋಕ್.ಟಿ.ಎನ್., ಸಹಾಯಕ ಕೃಷಿ ನಿರ್ದೇಶಕ(ಜಾರಿದಳ-1) ಪುಟ್ಟರಂಗಪ್ಪ, ಸಹಾಯಕ ಕೃಷಿ ನಿರ್ದೇಶಕ(ಜಾರಿದಳ-2) ಅಶ್ವತ್ಥನಾರಾಯಣ ವೈ. ಅವರು ಪಾಲ್ಗೊಂಡಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx