ತುರುವೇಕೆರೆ: ನಮ್ಮ ಧಾರ್ಮಿಕ ಆಚರಣೆಗಳಿಗೆ ಧಕ್ಕೆಯಾಗುತ್ತಿದ್ದು ಪ್ರತಿ ವರ್ಷದಂತೆ ನಡೆಯಬೇಕಿದ್ದ ಕೆಂಪಮ್ಮದೇವಿ ಮತ್ತು ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವ ಮುಂದೂಡಿರುವುದು ನಮಗೆ ಬಹಳ ಬೇಸರ ತಂದಿದೆ ಎಂದು ಮರಾಠಿ ಪಾಳ್ಯದ ಮಾದಿಗ ಸಮುದಾಯದ ಮುಖಂಡರಾದ ಬೈರಯ್ಯರವರು ಅಸಮಾಧಾನ ವ್ಯಕ್ತಪಡಿಸಿದ್ರು.
ಪಟ್ಟಣದ ಆದಿಜಾಂಭವ ಸಮಿತಿಯ ಕಚೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವುಗಳು ಕೂಡ ದಲಿತ ಜನಾಂಗದ ಮಾದಿಗ ಜಾತಿಗೆ ಸೇರಿದವರಾಗಿದ್ದು, ಅಸ್ಪೃಶ್ಯತೆ ನಮ್ಮ ಗ್ರಾಮದಲ್ಲಿ ಕುಣಿಕೇನಹಳ್ಳಿ ಗ್ರಾಮದಲ್ಲಿ ಇಲ್ಲ ಎಂದರು.
ತಾಲೂಕಿನ ಕುಣಿಕೇನಹಳ್ಳಿ ಗ್ರಾಮದಲ್ಲಿ ತಿಂಗಳ 5 ರಿಂದ ನಡೆಯಬೇಕಿದ್ದ ಜಾತ್ರಾ ಮಹೋತ್ಸವ ಕುಣಿಕೇನಹಳ್ಳಿ ಗ್ರಾಮದ ಚಲವಾದಿ ಸಮುದಾಯದ ಜಗದೀಶ್ ರವರು ಸಮಿತಿಗಳಲ್ಲಿ ನಮಗೂ ಸೇರ್ಪಡೆ ಮಾಡಿಕೊಳ್ಳಿ ಎಂಬುವ ಬೇಡಿಕೆಯಿಟ್ಟ ಕಾರಣ ಸವರ್ಣೀಯರು ಮತ್ತು ದಲಿತರ ನಡುವೆ ಸಂಘರ್ಷ ಉಂಟಾಗಿದ್ದು, ಜಾತ್ರಾ ಮಹೋತ್ಸವಕ್ಕಾಗಿ ತಾಲೂಕು ಕಚೇರಿಯಲ್ಲಿ ಶಾಂತಿ ನಡೆಸಿದರೂ ಅದು ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಎ.ಎನ್.ಅಹಮದ್ ಜಾತ್ರೆಯನ್ನು ಮುಂದೂಡುವಂತೆ ಹೇಳಿದ್ದರು.
ಕುಣಿಕೇನಹಳ್ಳಿ ಗ್ರಾಮದಲ್ಲಿ ಕೆಂಪಮ್ಮ ದೇವಿಯ ಜಾತ್ರೆಯಲ್ಲಿ ಮೆರವಣಿಗೆಯಲ್ಲಿ ಸಾಗುವ ದೇವರು ನಾವು ಪೂಜೆ ಮಾಡುವ ಚಿಕ್ಕಮ್ಮ ದೇವಿ ದೇವತೆಯಾಗಿದ್ದು, ಮಾದಿಗ ಸಮುದಾಯಕ್ಕೆ ಸೇರಿದ ನಾವು ಮರಾಠಿ ಪಾಳ್ಯದಲ್ಲಿ ಸುಮಾರು 10 ಮನೆಗಳ ಅರ್ಚಕರಿದ್ದು, ಪ್ರತಿ ತಿಂಗಳು ಪೂಜೆ ಪುನಸ್ಕಾರಗಳನ್ನು ಮುಂದೂಡಿಕೆ ಮಾಡುತ್ತಿರುವುದರಿಂದ ನಮಗೆ ಬಹಳ ಬೇಸರವಾಗಿದೆ ಎಂದರು.
ಈ ದೇವತೆಯ ಜಾತ್ರೆ ಮಾಡದಿದ್ದರೆ ಗ್ರಾಮಗಳಿಗೆ ಒಳಿತಾಗುವುದಿಲ್ಲ ಎಂಬ ಆತಂಕ ನಮ್ಮಲ್ಲಿ ಕಾಡುತ್ತಿದೆ. ತಲತಲಾಂತರದಿಂದ ನಡೆಸಿಕೊಂಡು ಬಂದಿರುವ ಜಾತ್ರಾ ಮಹೋತ್ಸವವನ್ನು ಯಾವುದೇ ಜಾತಿ ಭೇದವಿಲ್ಲದೆ ತಾರತಮ್ಯ ಮಾಡದೆ ನಮ್ಮ ಹಿರಿಯರು ನಡೆಸಿಕೊಂಡು ಬಂದಿದ್ದಾರೆ. ಶಾಂತಿ, ಸಾಮರಸ್ಯದಿಂದ ಜೀವನ ಮಾಡಿಕೊಂಡು, ಜಾತ್ರಾ ಮಹೋತ್ಸವದಲ್ಲಿ ವಿಜೃಂಭಣೆಯಿಂದ ಸಡಗರದಿಂದ ಆಚರಣೆ ಮಾಡುತ್ತಿದ್ದೆವು. ಆದರೆ ಈ ವರ್ಷದ ಜಾತ್ರೆಗೆ ಭಂಗ ಉಂಟಾಗಿದೆ. ದಯಮಾಡಿ ತಾಲೂಕು ಆಡಳಿತ ಇದನ್ನು ಸರಿಪಡಿಸಿ ಜಾತ್ರಾ ಮಹೋತ್ಸವ ಮಾಡುವಂತೆ ಮನವಿ ಮಾಡುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಚನ್ನಬಸವಯ್ಯ ಮಾಜಿ ಗ್ರಾಮ ಪಂಚಾಯತಿ ಸದಸ್ಯರು ಮರಾಠಿ ಪಾಳ್ಯ, ಚನ್ನಿಗಯ್ಯ, ನಾಗರಾಜ್, ಚೆನ್ನಿಗರಾಯ, ಗೇಟಪ್ಪ, ಪುಟ್ಟರಾಜು, ಚಂದ್ರೇಶ್, ಚನ್ನಪ್ಪ, ಪ್ರದೀಪ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಸುರೇಶ್ ಬಾಬು ಎಂ., ತುರುವೇಕೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KN8LiGgEw492Ijygqm0dVW
————————————