ತುರುವೇಕೆರೆ: ತಾಲೂಕಿನಲ್ಲಿರುವ ಪ್ರವಾಸಿ ಮಂದಿರಕ್ಕೆ ಇಂದು ಲೋಕಾಯುಕ್ತ ಇನ್ಸ್’ಪೆಕ್ಟರ್ ರಾಮರೆಡ್ಡಿ ಹಾಗೂ ತಂಡ ಭೇಟಿ ನೀಡಿ, ಸಾರ್ವಜನಿಕರ ಅಹವಾಲು, ರೈತರ ವಿವಿಧ ಬೇಡಿಕೆಗಳನ್ನು ಆಲಿಸಿದರು.
ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಲೋಕಾಯುಕ್ತರ ಬರುವಿಕೆಗಾಗಿ ತಾಲೂಕಿನ ಸರ್ಕಾರಿ ಅಧಿಕಾರಿಗಳು ಕಾಯುತ್ತಿದ್ದರು. ಸಭಾಂಗಣದ ಒಳಗಡೆ ಲೋಕಾಯುಕ್ತರು ಪ್ರವೇಶಿಸಿದ ತಕ್ಷಣವೇ, “ನಾವು ಯಾವುದೇ ತರಹದ ಸರ್ಕಾರಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಲು ಬಂದಿಲ್ಲ ನಮ್ಮ ಭೇಟಿ ಏನಿದ್ದರೂ ರೈತರು ಸಾರ್ವಜನಿಕರ ಮತ್ತು ಪತ್ರಕರ್ತರು ಜೊತೆಗೆ ಮಾತ್ರ” ಎಂದು ಹೇಳಿದರಲ್ಲದೇ, ಸಭಾಂಗಣದಲ್ಲಿದ್ದ ತಾಲೂಕಿನ ಸರ್ಕಾರಿ ಮೇಲಾಧಿಕಾರಿಗಳನ್ನು ತಮ್ಮ ತಮ್ಮ ಜವಾಬ್ದಾರಿಯುತ ಕೆಲಸಗಳಿಗೆ ಮರಳಲು ಸೂಚಿಸಿದರು.
ತದ ನಂತರ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದ ಅವರು, ಸುಮಾರು ನಾಲ್ಕು ಗಂಟೆಗಳ ಕಾಲ ಸಾರ್ವಜನಿಕರ, ರೈತರ ವಿವಿಧ ಸಮಸ್ಯೆಗಳನ್ನು ಆಲಿಸಿದರು. ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಇನ್ನೂ ಮುಂದೆ ಯಾವುದೇ ತರಹದ ಅಕ್ರಮಗಳಾಗಲಿ, ಅಧಿಕಾರಿಗಳ ಬೇಜವಾಬ್ದಾರಿಯಗಲಿ, ರೈತರನ್ನು ಪದೇಪದೇ ವಿನಾಕಾರಣ ಅಲೆಸಿ ತೊಂದರೆ ಕೊಡುವುದು, ಸರಿಯಾದ ಸಮಯಕ್ಕೆ ಸರ್ಕಾರಿ ಅಧಿಕಾರಿಗಳು ಬಾರದೇ ಇರುವುದು, ಲಂಚವನ್ನು ಕೇಳಿದರೆ ಅಂತಹ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಇನ್ನು ಅಹವಾಲುಗಳನ್ನು ಸ್ವೀಕರಿಸಿದ ಲೋಕಾಯುಕ್ತ ರಾಮರೆಡ್ಡಿ ಹಾಗೂ ತಂಡ ಸ್ಥಳದಲ್ಲಿಯೇ ಕೆಲವೊಂದು ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಫೋನಿನ ಸಂಭಾಷಣೆಯ ಮೂಲಕ ಮಾತನಾಡಿ ಇತ್ಯರ್ಥ ಗೊಳಿಸಿದರು.
ಈ ಸಂದರ್ಭದಲ್ಲಿ ರೈತರು ಸಾರ್ವಜನಿಕರು ಪತ್ರಿಕಾ ಮತ್ತು ಮಾಧ್ಯಮದ ನಾಗಭೂಷಣ್ , ಮಲ್ಲಿಕಾರ್ಜುನ್ ಸ್ವಾಮಿ, ಧರಣೇಶ್, ನಂದೀಶ್, ಮನೋಹರ್, ಸುರೇಶ್ ಬಾಬು ಸೇರಿದಂತೆ ಹಲವರು ಇದ್ದರು.
ವರದಿ: ಸುರೇಶ್ ಬಾಬು ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy