ಬೆಂಗಳೂರು: ಕರ್ನಾಟಕದ ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರ ಶಾಕ್ ನೀಡಲು ಮುಂದಾಗಿದೆ. ಶೀಘ್ರದಲ್ಲೇ ಮದ್ಯದ ಬೆಲೆಯಲ್ಲಿ ಶೇಕಡಾ 20 ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ರಾಜ್ಯದ ಅಬಕಾರಿ ತೆರಿಗೆ ನೀತಿಯಲ್ಲಿ ಮಹತ್ತರ ಬದಲಾವಣೆ ತರಲು ಸರ್ಕಾರ ಸಿದ್ಧತೆ ನಡೆಸುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.
ಇದುವರೆಗೆ ಮದ್ಯದ ಪ್ರಮಾಣದ (Volume) ಆಧಾರದ ಮೇಲೆ ತೆರಿಗೆ ವಿಧಿಸಲಾಗುತ್ತಿತ್ತು. ಆದರೆ ಹೊಸ ಪ್ರಸ್ತಾವನೆಯ ಪ್ರಕಾರ, ಮದ್ಯದಲ್ಲಿರುವ ಆಲ್ಕೋಹಾಲ್ ಅಂಶದ (Alcohol by Volume – ABV) ಆಧಾರದ ಮೇಲೆ ತೆರಿಗೆಯನ್ನು ಲೆಕ್ಕ ಹಾಕಲು ಸರ್ಕಾರ ನಿರ್ಧರಿಸಿದೆ. ಈ ಹೊಸ ವ್ಯವಸ್ಥೆಯನ್ನು ‘ಆಲ್ಕೋಹಾಲ್ ಇನ್ ಬೆವರೇಜ್’ (AIB) ತೆರಿಗೆ ಮಾದರಿ ಎಂದು ಕರೆಯಲಾಗುತ್ತಿದೆ. ಈ ಪದ್ಧತಿಯನ್ನು ಜಾರಿಗೆ ತರುತ್ತಿರುವ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಲಿದೆ.
ವಿಸ್ಕಿ, ರಮ್, ಬ್ರಾಂಡಿ ಮತ್ತು ಜಿನ್ ನಂತಹ ಮದ್ಯಗಳ ಮೊದಲ ನಾಲ್ಕು ಸ್ಲ್ಯಾಬ್ ಗಳಲ್ಲಿ (ಅಗ್ಗದ ದರದ ಮದ್ಯ) ಬೆಲೆ ಗಣನೀಯವಾಗಿ ಏರಿಕೆಯಾಗಲಿದೆ. ಅಬಕಾರಿ ಮೂಲಗಳ ಪ್ರಕಾರ, ಕನಿಷ್ಠ ಶೇ. 20 ರಷ್ಟು ಎಂಆರ್ ಪಿ (MRP) ಹೆಚ್ಚಾಗುವ ಸಾಧ್ಯತೆಯಿದೆ.
ಸ್ಕಾಚ್ ನಂತಹ ದುಬಾರಿ ಹಾಗೂ ಮೇಲ್ದರ್ಜೆಯ ಮದ್ಯಗಳ ಬೆಲೆಯಲ್ಲಿ ಇಳಿಕೆಯಾಗುವ ಅಥವಾ ಸ್ಥಿರವಾಗಿರುವ ಸಾಧ್ಯತೆಯಿದೆ. ಕಡಿಮೆ ಆಲ್ಕೋಹಾಲ್ ಅಂಶ ಹೊಂದಿರುವ ಬಿಯರ್ ಗಳ ಮೇಲಿನ ತೆರಿಗೆ ಕಡಿಮೆಯಾಗಿ, ಅವುಗಳ ಬೆಲೆ ಇಳಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.
ಸರ್ಕಾರದ ಈ ನಿರ್ಧಾರಕ್ಕೆ ಮದ್ಯ ತಯಾರಕರು ಮತ್ತು ಮಾರಾಟಗಾರರ ಸಂಘಟನೆಯಿಂದ ವಿರೋಧ ವ್ಯಕ್ತವಾಗಿದೆ. “ಮೊದಲ ನಾಲ್ಕು ಸ್ಲ್ಯಾಬ್ ಗಳ ಮದ್ಯವನ್ನು ಸಾಮಾನ್ಯ ಜನರು ಹೆಚ್ಚಾಗಿ ಬಳಸುತ್ತಾರೆ. ಈಗಾಗಲೇ ಹಣದುಬ್ಬರದಿಂದ ಕಷ್ಟದಲ್ಲಿರುವ ಸಾಮಾನ್ಯ ಜನರಿಗೆ ಇದು ಮತ್ತಷ್ಟು ಹೊರೆಯಾಗಲಿದೆ. ಇದರಿಂದ ಮಾರುಕಟ್ಟೆಯ ಮೇಲೆಯೂ ಕೆಟ್ಟ ಪರಿಣಾಮ ಬೀರಲಿದೆ” ಎಂದು ಕರ್ನಾಟಕ ಬ್ರೂವರೀಸ್ ಮತ್ತು ಡಿಸ್ಟಿಲರೀಸ್ ಅಸೋಸಿಯೇಷನ್ ಆತಂಕ ವ್ಯಕ್ತಪಡಿಸಿದೆ.
ಒಟ್ಟಾರೆಯಾಗಿ, ಸರ್ಕಾರದ ಈ ಹೊಸ ಕಂದಾಯ ನೀತಿಯು ಸಾಮಾನ್ಯ ಮದ್ಯ ಸೇವಿಸುವವರ ಜೇಬಿಗೆ ಕತ್ತರಿ ಹಾಕುವುದಂತೂ ಖಚಿತ ಎನ್ನಲಾಗುತ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


