ಪಿಎಸ್’ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಸಿಐಡಿ ಅಧಿಕಾರಿಗಳು ಪ್ರಮುಖ 8 ಮಂದಿ ಆರೋಪಿಗಳನ್ನು ವಶಕ್ಕೆ ಪಡೆಯಲು ಮುಂದಾಗಿ 6 ಕೋಟಿ ಹಣ ಸಂಗ್ರಹದ ಜಾಡು ಪತ್ತೆ ಹಚ್ಚಲು ಹೊರಟಿರುವುದು ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ.
ಪ್ರಕರಣದ ಕಿಂಗ್ ಪಿನ್ ಆರ್.ಡಿ.ಪಾಟೀಲ್‌ಗೆ ಹಣ ನೀಡಿ ಒಪ್ಪಂದ ಮಾಡಿಕೊಂಡಿದ್ದ ಆರೋಪದಡಿ ಶರಣ ಬಸವೇಶ್ವರ ಆರ್ಟ್ಸ್, ಸೈನ್ಸ್, ಕಾಮರ್ಸ್ ಕಾಲೇಜು ಹಾಗೂ ಎಂ.ಎಸ್ ಇರಾನಿ ಕಾಲೇಜಿನಲ್ಲಿ ಪರೀಕ್ಷೆ ಎದುರಿಸಿದ್ದ ಅಭ್ಯರ್ಥಿಗಳಾದ ಕಲ್ಲಪ್ಪ, ಸಿದ್ದುಗೌಡ, ಈರಪ್ಪ, ಸೋಮನಾಥ, ರವಿರಾಜ, ಶ್ರೀಶೈಲ, ಭಗವಂತ್ ರಾಯ್ ನನ್ನು ವಶಕ್ಕೆ ಪಡೆಯಲು ಸಿಐಡಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಆರೋಪಿಗಳ ಪೈಕಿ ಸಿದ್ಧುಗೌಡ – ಆರ್.ಡಿ ಪಾಟೀಲ್ ಸಂಬಂಧಿ ಹಾಗೂ ಹೆಲ್ತ್ ಡಿಪಾರ್ಟ್‌ಮೆಂಟ್‌ನಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಕಲ್ಲಪ್ಪ- ಪೊಲೀಸ್ ಕಾನ್ಸ್ ಟೇಬಲ್, ಸೋಮನಾಥ- ವ್ಯವಸಾಯ ಮಾಡಿಕೊಂಡಿದ್ದ. ಇನ್ನು ವಿಜಯ್ ಕುಮಾರ್ – ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ರವಿರಾಜ- ಮೊದಲ ರ್‍ಯಾಂಕ್ ಪಡೆದಿರುವ ಆರೋಪಿಯಾಗಿದ್ದಾನೆ. ಶ್ರೀಶೈಲ- ಪದವೀಧರನಾಗಿದ್ದು, ಪಿಎಸ್‌ಐ ಹುದ್ದೆಗಾಗಿ ಡೀಲ್ ಮಾಡಿದ್ದ ಆರೋಪವಿದೆ.
ಭಗವಂತರಾಯ್ – ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರೆ, ಈರಪ್ಪ- ಅಡುಗೆ ಭಟ್ಟನಾಗಿ ಕೆಲಸ ಮಾಡಿಕೊಂಡಿದ್ದ. ಈ 8 ಮಂದಿ ಅಭ್ಯರ್ಥಿಗಳಿಂದ ಒಟ್ಟು 6 ಕೋಟಿ ಹಣವನ್ನು ಆರ್.ಡಿ.ಪಾಟೀಲ್ ಸಂಗ್ರಹಿಸಿ ಎಲ್ಲರಿಗೂ ಬ್ಲ್ಯೂಟೂತ್ ಡಿವೈಸ್ ನೀಡಿರುವುದು ತನಿಖೆ ವೇಳೆ ಬಯಲಾಗಿದೆ.
ಶಾಂತಕುಮಾರ್ ಒಪ್ಪಂದ:
ಈ ನಡುವೆ ಪಿಎಸ್‌ಐ ನೇಮಕಾತಿ ಅಕ್ರಮ ಸಂಬಂಧ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ೩೦ನೇ ಆರೋಪಿ ಆರ್. ಮಂಜುನಾಥ್, ನೇಮಕಾತಿ ವಿಭಾಗದ ಎಫ್ ಡಿಎ ಡಿ. ಹರ್ಷ ಹಾಗೂ ಡಿವೈಎಸ್ಪಿ ಶಾಂತಕುಮಾರ್ ಜೊತೆ ಒಪ್ಪಂದ ಮಾಡಿಸಿದ ಸಂಗತಿಯು ಕೆಲ ದಿನಗಳ ಹಿಂದೆ ಸಿಐಡಿ ಅಧಿಕಾರಿಗಳು ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಬೆಳಕಿಗೆ ಬಂದಿದೆ.
ಶ್ರೀಗಂಧಕಾವಲು ಬಳಿಯ ‘ಡಿ’ ಗ್ರೂಪ್ ಲೇಔಟ್‌ನ ಮಂಜುನಾಥ್ ಪೊಲೀಸ್ ಪ್ರಧಾನ ಕಚೇರಿ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರ (ಡಿಜಿ?ಐಜಿಪಿ) ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ (ಎಫ್‌ಡಿಎ) ಹಲವು ವರ್ಷ ಕೆಲಸ ಮಾಡುತ್ತಿದ್ದು. ಇದೇ ವೇಳೆಯೇ ಈತ, ನೇಮಕಾತಿ ವಿಭಾಗದ ಸಿಬ್ಬಂದಿ ಜೊತೆ ಸ್ನೇಹ ಬೆಳೆಸಿಕೊಂಡು ಅಕ್ರಮ ನಡೆಸಿರುವುದು ಆರೋಪಪಟ್ಟಿಯಲ್ಲಿ ಉಲ್ಲೇಖಗೊಂಡಿದೆ.
ಪೊಲೀಸ್ ಇಲಾಖೆ ಪ್ರತಿನಿಧಿಯಾಗಿ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೂ ಆಯ್ಕೆಯಾಗಿದ್ದ ಮಂಜುನಾಥ್, ಅಭ್ಯರ್ಥಿಗಳನ್ನು ಅಕ್ರಮವಾಗಿ ಪಿಎಸ್‌ಐ ಮಾಡಿಸಿ, ಹಣ ಸಂಪಾದಿಸುವ ಸಂಚು ರೂಪಿಸಿದ್ದರು’ ಎಂಬ ಮಾಹಿತಿ ಪಟ್ಟಿಯಲ್ಲಿದೆ.
45 ಲಕ್ಷ ಪಾವತಿ:
ಯಲಹಂಕ ತಾಲ್ಲೂಕಿನ ಸಿಂಗಜಾಲದ ಅಭ್ಯರ್ಥಿ ಎಚ್. ಯಶವಂತಗೌಡನನ್ನು (೨೮) ಸಂಪರ್ಕಿಸಿದ್ದ ಆರ್. ಮಂಜುನಾಥ್, ೫೦ ಲಕ್ಷ ನೀಡಿದರೆ ಪಿಎಸ್‌ಐ ಮಾಡಿಸುವುದಾಗಿ ಹೇಳಿದ್ದ. ಆತನ ಮಾತಿನಂತೆ ಹಣ ನೀಡಲು ಯಶವಂತಗೌಡ ಒಪ್ಪಿದ್ದ’ ಎಂಬ ಅಂಶವನ್ನು ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
‘ಎಫ್ ಡಿಎ ಹರ್ಷ ಮೂಲಕ ಡಿವೈಎಸ್ಪಿ ಶಾಂತಕುಮಾರ್ ಅವರನ್ನು ಸಂಪ ರ್ಕಿಸಿದ್ದ ಮಂಜುನಾಥ್, ಯಶವಂತ ಗೌಡನನ್ನು ಪಿಎಸ್‌ಐ ಮಾಡಲು ೫೦ ಲಕ್ಷಕ್ಕೆ ಒಪ್ಪಂದ ಮಾಡಿಕೊಂಡಿದ್ದ. ಮೊದಲ ಕಂತಿನಲ್ಲೇ 45 ಲಕ್ಷ ಸಹ ಪಾವತಿ ಮಾಡಲಾಗಿತ್ತು.
ಹಣ ಪಡೆದಿದ್ದ ಡಿವೈಎಸ್ಪಿ, ಪೂರ್ವ ನಿಯೋಜಿತ ಸಂಚಿನಂತೆ ಯಶವಂತ ಗೌಡನ ಒಎಂಆರ್ ಪ್ರತಿ ತಿದ್ದುಪಡಿ ಮಾಡಿಸಿದ್ದ. ಪತ್ರಿಕೆ? 1ರಲ್ಲಿ (ಪ್ರಬಂಧ, ಭಾಷಾಂತರ, ಸಾರಾಂಶ ಬರಹ) 34.5 ಅಂಕ ಹಾಗೂ ಪತ್ರಿಕೆ 2ರಲ್ಲಿ (ಸಾಮಾನ್ಯ ಅಧ್ಯಯನ) 123.75 ಅಂಕ ಬಂದಿತ್ತು. ಒಟ್ಟು 158.25೧೫೮.೨೫ ಅಂಕದೊಂದಿಗೆ ಯಶವಂತಗೌಡ, ರಾಜ್ಯಕ್ಕೆ ೮ನೇ ರ್‍ಯಾಂಕ್ ಪಡೆದಿದ್ದ’ ಎಂಬ ಮಾಹಿತಿ ಪಟ್ಟಿಯಲ್ಲಿದೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz