ಬೆಳಗಾವಿ: ರಾಜ್ಯ ಸರ್ಕಾರದ ಒಳ ಮೀಸಲಾತಿ ಜಾರಿಗೊಳಿಸುವ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಬೆಂಬಲ ಮತ್ತು ಜನಮನ್ನಣೆ ವ್ಯಕ್ತವಾಗುತ್ತಿದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಶನಿವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತೆಗೆದುಕೊಂಡಿರುವ ಈ ತೀರ್ಮಾನವು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಒಂದು ‘ಐತಿಹಾಸಿಕ’ ನಡೆಯಾಗಿದೆ ಎಂದು ಬಣ್ಣಿಸಿದರು.
ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಜಾರಿ ಬಗ್ಗೆ ಸುದೀರ್ಘ ಚರ್ಚೆ ನಡೆದಿದ್ದು, ಎಲ್ಲಾ ಸಮುದಾಯಗಳನ್ನು ಪ್ರತಿನಿಧಿಸುವ ಸಚಿವರು ಒಮ್ಮತದಿಂದ ಈ ನಿರ್ಧಾರಕ್ಕೆ ಅಸ್ತು ಎಂದಿದ್ದಾರೆ. ಸಂಪುಟದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿರಲಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಬಹುಕಾಲದ ಬೇಡಿಕೆಯಾಗಿದ್ದ ಒಳ ಮೀಸಲಾತಿಯಿಂದಾಗಿ ಅರ್ಹ ಸಮುದಾಯಗಳಿಗೆ ಮೀಸಲಾತಿಯ ಸೌಲಭ್ಯಗಳು ಸಮಾನವಾಗಿ ಹಂಚಿಕೆಯಾಗಲಿವೆ. ಇದು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ತಲುಪಿಸಲು ಸಹಕಾರಿಯಾಗಲಿದೆ.
ಸರ್ಕಾರದ ಈ ಕ್ರಮವನ್ನು ಟೀಕಿಸುತ್ತಿರುವ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಜಾರಕಿಹೊಳಿ, ವಿರೋಧ ಪಕ್ಷದವರು ಸರ್ಕಾರದ ಪ್ರತಿಯೊಂದು ನಿರ್ಧಾರದಲ್ಲೂ ತಪ್ಪು ಹುಡುಕುವುದು ಸಹಜ. ಆದರೆ ಜನರ ಬೆಂಬಲ ಸರ್ಕಾರದ ಜೊತೆಗಿದೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


