ಬೆಂಗಳೂರು: ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಾಖಂಡದಲ್ಲಿ ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ ಮಾಡಿದ ಘಟನೆಯನ್ನು ಖಂಡಿಸಿ ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಖಂಡನಾ ನಿರ್ಣಯ ಮಂಡಿಸಿ, ಅಂಗೀಕರಿಸಲಾಗಿದೆ.
ವಿಧಾನ ಪರಿಷತ್ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಜಕ್ಕಪ್ಪನವರ್ ಈ ಖಂಡನಾ ನಿರ್ಣಯವನ್ನು ಮಂಡಿಸಿದರು. ನಿರ್ಣಯ ಮಂಡನೆ ವೇಳೆ ಬಿಜೆಪಿ ವಿರುದ್ಧ ತೀವ್ರ ಆರೋಪಗಳನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ವಿಪಕ್ಷಗಳ ಪ್ರತಿಭಟನೆ ಮತ್ತು ಸದನದಲ್ಲಾದ ಗದ್ದಲದ ನಡುವೆಯೇ ಧ್ವನಿ ಮತದ ಮೂಲಕ ಖಂಡನಾ ನಿರ್ಣಯವನ್ನು ಅಂಗೀಕರಿಸಲಾಯಿತು. ಆಗಸ್ಟ್ 8ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉತ್ತರಾಖಂಡದಲ್ಲಿ ರ‍್ಯಾಲಿ ನಡೆಸಿ ಭಾಷಣ ಮಾಡಿದ್ದರು. ತದನಂತರ ಆಗಸ್ಟ್ 10 ರಂದು ‘ಶ್ರೀರಾಮ ಸೇನಾ ಧರ್ಮಾರ್ಥ ಸೇವಾ ನ್ಯಾಸ್’ ಸಂಘಟನೆಯಿಂದ ಆ ಸ್ಥಳದಲ್ಲಿ ಶುದ್ಧೀಕರಣ ಹೋಮ ನಡೆಸಲಾಗಿತ್ತು. ಖರ್ಗೆ ಅವರು ದಲಿತ ಸಮುದಾಯಕ್ಕೆ ಸೇರಿದವರೆಂಬ ಕಾರಣಕ್ಕಾಗಿಯೇ ಈ ರೀತಿ ಶುದ್ಧೀಕರಣ ಹೋಮ ಮಾಡಲಾಗಿದೆ ಎಂದು ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಈ ವಿಚಾರವನ್ನು ರಾಜ್ಯಸಭೆಯಲ್ಲೂ ಪ್ರಸ್ತಾಪಿಸಿದ್ದ ಮಲ್ಲಿಕಾರ್ಜುನ ಖರ್ಗೆ, “ಈ ದೇಶದಲ್ಲಿ ದಲಿತರಿಗೆ ಜಾಗವಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸಲಾಗುತ್ತಿದೆ. ನಾನು ನನ್ನ ಭಾಷಣದಲ್ಲಿ ಯಾವುದೇ ಧರ್ಮ ಅಥವಾ ಸಮುದಾಯದ ವಿರುದ್ಧ ಮಾತನಾಡಿಲ್ಲ, ಬದಲಿಗೆ ಸರ್ಕಾರದ ಸಮಸ್ಯೆಗಳ ಬಗ್ಗೆ ಮಾತ್ರ ಪ್ರಸ್ತಾಪಿಸಿದ್ದೆ,” ಎಂದು ಕಿಡಿಕಾರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
