ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಬರ್ಬರ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಇತರ ಆರೋಪಿಗಳಿಗೆ ಭಾರೀ ಕಾನೂನು ಸಂಕಷ್ಟ ಎದುರಾಗಿದೆ. ಪ್ರಕರಣದ 14ನೇ ಆರೋಪಿ (A–14) ಪ್ರದೋಷ್ ಸೋಮವಾರ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಅಧಿಕೃತವಾಗಿ ಮಾಫಿ (Approver) ಸಾಕ್ಷ್ಯ ಹೇಳಿಕೆಯನ್ನು ದಾಖಲಿಸಿದ್ದಾರೆ.
ವರದಿಗಳ ಪ್ರಕಾರ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಗಿ ಪೊಲೀಸ್ ಭದ್ರತೆಯಲ್ಲಿ ಪ್ರದೋಷ್ ಅವರನ್ನು ಸೆಷನ್ಸ್ ಕೋರ್ಟ್‌ಗೆ ಕರೆತಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಈ ಸಂದರ್ಭದಲ್ಲಿ ದರ್ಶನ್ ಪರ ವಕೀಲರು ಪ್ರದೋಷ್ ಹೇಳಿಕೆ ದಾಖಲಿಸಿಕೊಳ್ಳುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ, ಹೇಳಿಕೆ ದಾಖಲಾತಿಯ ಪ್ರಕ್ರಿಯೆಯನ್ನು ಕನಿಷ್ಠ 10 ದಿನಗಳ ಕಾಲ ಮುಂದೂಡುವಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು.
ದರ್ಶನ್ ಪರ ವಕೀಲರ ಅರ್ಜಿಗೆ ಪ್ರಾಸಿಕ್ಯೂಷನ್ ಪರ ವಿಶೇಷ ಸರ್ಕಾರಿ ಅಭಿಯೋಜಕ (ಎಸ್ ಪಿಪಿ) ಪ್ರಸನ್ನ ಕುಮಾರ್ ಪ್ರಬಲ ಆಕ್ಷೇಪ ವ್ಯಕ್ತಪಡಿಸಿದರು. ಈಗಾಗಲೇ ಶನಿವಾರವೇ ಸೆಷನ್ಸ್ ಕೋರ್ಟ್ ಇವರ ಮುಂದೂಡಿಕೆ ಅರ್ಜಿಯನ್ನು ವಜಾಗೊಳಿಸಿದೆ. ಸುಪ್ರೀಂ ಕೋರ್ಟ್ ಕೂಡ ಈ ಪ್ರಕರಣದ ತ್ವರಿತಗತಿಯ ವಿಚಾರಣೆಗೆ ಸ್ಪಷ್ಟ ನಿರ್ದೇಶನ ನೀಡಿದೆ ಎಂದು ವಾದ ಮಂಡಿಸಿದರು. ಎಸ್ ಪಿಪಿ ವಾದವನ್ನು ಪುರಸ್ಕರಿಸಿದ ನ್ಯಾಯಾಧೀಶರು, ದರ್ಶನ್ ವಕೀಲರ ಮನವಿಯನ್ನು ಸಾರಾಸಗಟಾಗಿ ತಿರಸ್ಕರಿಸಿದರು.
ಮುಚ್ಚಿದ ಕೊಠಡಿಯಲ್ಲಿ ಹೇಳಿಕೆ ದಾಖಲು:
ಆಕ್ಷೇಪಣೆ ತಿರಸ್ಕರಿಸಿದ ಬೆನ್ನಲ್ಲೇ ನ್ಯಾಯಾಧೀಶರು ಕೋರ್ಟ್ ಹಾಲ್‌ನಲ್ಲಿದ್ದ ಎಲ್ಲರನ್ನೂ ಹೊರಗೆ ಕಳುಹಿಸಿ, ಮುಚ್ಚಿದ ಕೊಠಡಿಯಲ್ಲಿ (In-camera) ಪ್ರದೋಷ್ ಹೇಳಿಕೆಯನ್ನು ದಾಖಲಿಸಿಕೊಂಡರು. ರೇಣುಕಾಸ್ವಾಮಿ ಕೊಲೆಯ ಸಂಚು ಹೇಗೆ ರೂಪಿಸಲಾಯಿತು, ಅದರಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಅವರ ಪಾತ್ರವೇನು ಎಂಬಿತ್ಯಾದಿ ಸ್ಫೋಟಕ ವಿವರಗಳನ್ನು ಪ್ರದೋಷ್ ನ್ಯಾಯಾಧೀಶರ ಮುಂದೆ ವಿವರಿಸಿದ್ದಾರೆ ಎನ್ನಲಾಗಿದೆ.
ಪ್ರದೋಷ್ ನೀಡಿದ ಸಂಪೂರ್ಣ ಹೇಳಿಕೆಯನ್ನು ಜೈಲಿನಲ್ಲೇ ಇದ್ದ ನಟ ದರ್ಶನ್ ಹಾಗೂ ಪವಿತ್ರಾ ಗೌಡ ವಿಡಿಯೋ ಕಾನ್ಫರೆನ್ಸ್ (VC) ಮೂಲಕ ನೇರವಾಗಿ ಆಲಿಸಿದ್ದಾರೆ. ಪ್ರಮುಖ ಆರೋಪಿಯೊಬ್ಬ ಮಾಫಿ ಸಾಕ್ಷಿಯಾಗಿ ನೀಡಿರುವ ಈ ಸಾಕ್ಷ್ಯವು ಮುಂಬರುವ ದಿನಗಳಲ್ಲಿ ದರ್ಶನ್ ಮತ್ತು ಗ್ಯಾಂಗ್ ಗೆ ಭಾರಿ ಕಾನೂನು ಹಿನ್ನಡೆಯಾಗುವ ಸಾಧ್ಯತೆಯನ್ನು ತಂದೊಡ್ಡಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
