ಬೆಂಗಳೂರು: ಕೆಜಿಎಫ್ ಸರಣಿಯ ಅಭೂತಪೂರ್ವ ಯಶಸ್ಸಿನ ನಂತರ, ಇಡೀ ವಿಶ್ವವೇ ಎದುರು ನೋಡುತ್ತಿದ್ದ ಯಶ್ ಅಭಿನಯದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ (Toxic) ಚಿತ್ರದ ಬಿಡುಗಡೆ ದಿನಾಂಕ ಮತ್ತೆ ಮುಂದೂಡಿಕೆಯಾಗಿದೆ. ಈ ಬಗ್ಗೆ ಸ್ವತಃ ನಟ ಯಶ್ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.
ಈ ಮೊದಲು ಚಿತ್ರವನ್ನು ಜೂನ್ 4 ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಆದರೆ ಇತ್ತೀಚೆಗೆ ಅಮೆರಿಕದ ಲಾಸ್ ವೇಗಾಸ್ ನಲ್ಲಿ ನಡೆದ ಪ್ರತಿಷ್ಠಿತ ‘ಸಿನೆಮಾಕಾನ್’ (CinemaCon) ಈವೆಂಟ್ ನಲ್ಲಿ ಟಾಕ್ಸಿಕ್ ಚಿತ್ರದ ಪ್ರೆಸೆಂಟೇಶನ್ ಗೆ ಜಾಗತಿಕ ವಿತರಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದ ವ್ಯಾಪ್ತಿ ಈಗ ಜಾಗತಿಕ ಮಟ್ಟಕ್ಕೆ ವಿಸ್ತರಿಸಲ್ಪಟ್ಟಿದ್ದು, ವಿಶ್ವದಾದ್ಯಂತ ಅತೀ ದೊಡ್ಡ ಮಟ್ಟದಲ್ಲಿ ಏಕಕಾಲಕ್ಕೆ ತೆರೆಗೆ ತರುವ ಉದ್ದೇಶದಿಂದ ದಿನಾಂಕವನ್ನು ಮರುಹೊಂದಿಸಲಾಗಿದೆ ಎಂದು ಯಶ್ ತಿಳಿಸಿದ್ದಾರೆ.
“ಟಾಕ್ಸಿಕ್ ನನ್ನ ಪಾಲಿಗೆ ಒಂದು ವಿಶೇಷ ಪಯಣ. ಸಿನೆಮಾಕಾನ್ ನಲ್ಲಿ ಸಿಕ್ಕ ಪ್ರತಿಕ್ರಿಯೆ ನಮ್ಮ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿದೆ. ಭಾರತೀಯ ಚಿತ್ರರಂಗದ ಮಟ್ಟವನ್ನು ಎತ್ತರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಆದ್ದರಿಂದ ಚಿತ್ರವು ಜಾಗತಿಕ ಮಾರುಕಟ್ಟೆಗೆ ಪೂರಕವಾದ ಹೊಸ ದಿನಾಂಕದಂದು ಬಿಡುಗಡೆಯಾಗಲಿದೆ. ಅಭಿಮಾನಿಗಳು ಸ್ವಲ್ಪ ತಾಳ್ಮೆಯಿಂದ ಇರಬೇಕು, ನಾವು ನಿಮಗೆ ಅತ್ಯುತ್ತಮ ಸಿನಿಮಾವನ್ನೇ ನೀಡುತ್ತೇವೆ” ಎಂದು ಯಶ್ ಭರವಸೆ ನೀಡಿದ್ದಾರೆ.
ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರವು ಭಾರತೀಯ ಚಿತ್ರರಂಗ ಹೆಮ್ಮೆ ಪಡುವಂತೆ ಮೂಡಿಬರುತ್ತಿದ್ದು, ಶೀಘ್ರದಲ್ಲೇ ಚಿತ್ರತಂಡವು ಹೊಸ ಮತ್ತು ಅಂತಿಮ ಬಿಡುಗಡೆ ದಿನಾಂಕವನ್ನು ಘೋಷಿಸಲಿದೆ.
ಸದ್ಯಕ್ಕೆ ರಾಕಿ ಭಾಯ್ ಅಭಿಮಾನಿಗಳು ‘ಟಾಕ್ಸಿಕ್’ ಅಬ್ಬರವನ್ನು ನೋಡಲು ಇನ್ನೂ ಕೆಲವು ದಿನ ಕಾಯುವುದು ಅನಿವಾರ್ಯವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


