ಉತ್ತರ ಕರ್ನಾಟಕ ಹಾಗೂ ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಮನೆಯ ಮೇಲೆ ಮರ ಬಿದ್ದು, ಇಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿ ಸಂಭವಿಸಿದೆ. ಕಲಬುರಗಿ ಜಿಲ್ಲೆಯಲ್ಲಿ ಮಳೆ ಅಬ್ಬರದಿಂದಾಗಿ ಭೀಮಾ ನದಿಯಲ್ಲಿ ದತ್ತಾತ್ರೇಯ ದೇವರ ಭಕ್ತ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ಮನೆಯ ಗೋಡೆ ಕುಸಿದು ಗಂಭೀರವಾಗಿ ಗಾಯಗೊಂಡಿದ್ದ ಯುವಕ ಸಾವನ್ನಪ್ಪಿರುವ ಘಟನೆ ಶಿಗ್ಗಾವಿ ತಾಲ್ಲೂಕಿನ ಕುನ್ನೂರು ಗ್ರಾಮದಲ್ಲಿ ಸಂಭವಿಸಿದೆ.ಮೃತ ವ್ಯಕ್ತಿಯನ್ನು ಮುಸ್ತಾಕ್ ಎರಗುಪ್ಪಿ ಎಂದು ಗುರುತಿಸಲಾಗಿದೆ. ಮಳೆಯಿಂದಾಗಿ ಗೋಡೆ ಶಿಥಿಲಗೊಂಡಿದ್ದರಿಂದ ಗೋಡೆ ಕುಸಿದು ಬಿದ್ದು, ಈ ದುರ್ಘಟನೆ ಸಂಭವಿಸಿದೆ.
ಗಂಭೀರವಾಗಿ ಗಾಯಗೊಂಡಿದ್ದ ಮುಸ್ತಾಕ್‌ನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮುಸ್ತಾಕ್ ಮೃತಪಟ್ಟಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮೂಡಿಗೆರೆ, ಕಳಸಾ ತಾಲ್ಲೂಕಿನ ಶಾಲೆಗಳಿಗೆ ರಜೆ ನೀಡಲಾಗಿದೆ.
ವಿಜಯಪುರ ಜಿಲ್ಲೆಯಲ್ಲಿ ಡೋಣಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಮಳೆಹಾನಿ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ್‌ಕತ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದೇವರ ಹಿಪ್ಪರಗಿ ತಾಲ್ಲೂಕಿನ ಸಾತಿಹಾಳ ಗ್ರಾಮಸ್ಥರು ಪ್ರವಾಹ ಪರಿಸ್ಥಿತಿಯಿಂದಾಗಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದು, ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಕೊಪ್ಪಳ ತಾಲ್ಲೂಕಿನ ಶಿವಪುರ ಬಳಿ ನಡುಗಡ್ಡೆಯಲ್ಲಿ ಭತ್ತ ನಾಟಿ ಮಾಡಲು ತೆರಳಿದ್ದ ರೈತರು, ಸಿಕ್ಕಿಹಾಕಿಕೊಂಡಿದ್ದಾರೆ. ತುಂಗಭದ್ರ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ರೈತರು ಮತ್ತು ದನ ಮೇಯಿಸಲು ಹೋದವರು ನಡುಗಡ್ಡೆಯಲ್ಲಿ ೧೦ಕ್ಕೂ ಹೆಚ್ಚು ರೈತರು ಸಿಕ್ಕಿಹಾಕಿಕೊಂಡಿದ್ದಾರೆ.
ಸ್ಥಳಕ್ಕೆ ಕೊಪ್ಪಳ ತಹಶೀಲ್ದಾರ್ ಭೇಟಿ ನೀಡಿ ಅವರನ್ನು ಸುರಕ್ಷಿತವಾಗಿ ಪಾರು ಮಾಡಲು ಕ್ರಮಕೈಗೊಂಡಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲೂ ವರುಣನ ಪ್ರತಾಪ ಮುಂದುವರೆದಿದೆ. ದತ್ತಾತ್ರೇಯ ದೇವರ ಭಕ್ತರೊಬ್ಬರು ನೀರಿನಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ.
ಕಲಬುರಗಿಯಲ್ಲಿ ಭೀಮಾ ನದಿಯಲ್ಲಿ ಕೊಚ್ಚಿ ಹೋದ ವ್ಯಕ್ತಿಯನ್ನು ಗೋಪಾಲ್ ರಾಠೋಡ್ (೨೦) ಕೊಚ್ಚಿ ಹೋದ ಯುವಕ ಎಂದು ಗುರುತಿಸಲಾಗಿದೆ. ಈತ ಮಹಾರಾಷ್ಟ್ರದ ರಾಠೋಡ್ ನಿವಾಸಿ ಎಂದು ಹೇಳಲಾಗಿದೆ.
ಉಡುಪಿ ಜಿಲ್ಲೆಯ ಕಾಲ್‌ತೋಡಿನಲ್ಲಿ ನೀರು ಪಾಲಾಗಿದ್ದ ಬಾಲಕಿ ಸನ್ನಿದಿ ಮೃತದೇಹ ೨ ದಿನವಾದರೂ ಪತ್ತೆಯಾಗಿಲ್ಲ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಗ್ರಾಮಸ್ಥರು ಮೃತದೇಹದ ಹುಡುಕಾಟ ನಡೆಸಿದ್ದಾರೆ.
ಮಹಾರಾಷ್ಟ್ರ ಘಟ್ಟ ಪ್ರದೇಶ ಹಾಗೂ ಬೆಳಗಾವಿ ಜಿಲ್ಲೆಯಾದ್ಯಂತ ಭಾರಿ ಮಳೆ ಬೀಳುತ್ತಿರುವುದರಿಂದಾಗಿ ಮಳೆ ನೀರು ಹೆಚ್ಚಳವಾಗಿದ್ದು, ನಿಪ್ಪಾಣಿ ತಾಲ್ಲೂಕಿನ ದೂದ್‌ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಾರದಗ-ಭೋಜ, ಮಲಿಕಾವಾಡ್-ದತ್ತವಾಡಾ ಸೇತುವೆಗಳು ನೀರಿನಲ್ಲಿ ಮುಳುಗಿವೆ.
ದಾವಣಗೆರೆ ಜಿಲ್ಲೆಯಲ್ಲಿ ಸತತ ಮಳೆಯಿಂದಾಗಿ ಮೆಕ್ಕೆಜೋಳ ಬೆಳೆ ಹಾನಿಯಾಗಿದೆ. ಜಗಳೂರು, ಹೊನ್ನಾಳಿ ಭಾಗದಲ್ಲಿ ಜಮೀನಿನಲ್ಲಿ ನೀರು ನಿಂತ ಕಾರಣ ಭಾರಿ ಬೆಳೆ ನೀರು ಪಾಲಾಗಿದೆ.ತುಂಗಭದ್ರ ಜಲಾಶಯದಿಂದ ೧ ಲಕ್ಷ ೭೦ ಸಾವಿರ ಕ್ಯೂಸೆಕ್ ನೀರು ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಹುಲಿಗೆಮ್ಮ ದೇವಾಲಯಕ್ಕೆ ಪ್ರವಾಹದ ಭೀತಿ ಎದುರಾಗಿದೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy