ಬೆಂಗಳೂರು: ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ ಎಸ್ ಎಸ್) ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, “ಆರ್ ಎಸ್ ಎಸ್ ಹಾಗೂ ಬಿಜೆಪಿಯವರನ್ನು ಬೆಂಗಳೂರಿನಿಂದಲೇ ಓಡಿಸಬೇಕು” ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿರುವುದು ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.
ನಗರದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಶಾಸಕರು ಬೋಗಸ್ಗಳಾಗಿದ್ದು, ಅವರಿಗೆ ವಂದೇ ಮಾತರಂ ಗೀತೆಯನ್ನು ನೋಡಿಕೊಂಡು ಸಹ ಹೇಳಲು ಬರುವುದಿಲ್ಲ. ಆದರೆ ವಂದೇ ಮಾತರಂ ಗೀತೆಯನ್ನು ಕಾಂಗ್ರೆಸ್‌ನವರಾದ ನಾವು ಚೆನ್ನಾಗಿ ಹಾಡುತ್ತೇವೆ ಎಂದು ವಾಗ್ದಾಳಿ ನಡೆಸಿದರು. ಅಲ್ಲದೆ, ಬಿಜೆಪಿಗರು ಖಾಕಿ ಚಡ್ಡಿ ಹಾಕಿ, ಕೈಯಲ್ಲಿ ದೊಣ್ಣೆ ಹಿಡಿದು ಸಂಜೆ ವೇಳೆ ಹೋಗಲಿ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ಪಕ್ಷ ಹರಿಯುವ ನೀರಿದ್ದಂತೆ, ನಿರಂತರ ಪರಿಶ್ರಮದಿಂದ ಎಲ್ಲರಿಗೂ ಉನ್ನತ ಸ್ಥಾನಮಾನ ಸಿಗುತ್ತದೆ ಎಂದರು.
ಇದೇ ವೇಳೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧವೂ ಹರಿಪ್ರಸಾದ್ ಏಕವಚನದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಜ್ಞಾನೇಶ್ ಕುಮಾರ್ ಒಬ್ಬ ಅಜ್ಞಾನಿ ಮತ್ತು ನೀಚರಾಗಿದ್ದು, ಅವರು ಹುದ್ದೆಯಿಂದ ಹೋಗುವ ತನಕ ಹೋರಾಟ ಮುಂದುವರಿಸಬೇಕು. ಅವರ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಅರ್ಹ ಮತದಾರರ ಹೆಸರನ್ನೇ ಪಟ್ಟಿಯಿಂದ ಕೈಬಿಡುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಹರಿಪ್ರಸಾದ್ ಅವರ ಈ ಉದ್ರೇಕಕಾರಿ ಹೇಳಿಕೆಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾರನ್ನೂ ಬೆಂಗಳೂರು ಬಿಟ್ಟು ಓಡಿಸಲು ಸಾಧ್ಯವಿಲ್ಲ. ಹರಿಪ್ರಸಾದ್ ಅವರದ್ದು ಹಿಂದಿನಿಂದಲೂ ಹೊಡಿಬಡಿ ಸಂಸ್ಕೃತಿ ಆಗಿದ್ದು, ಅವರಿಂದ ಒಳ್ಳೆಯದನ್ನು ನಿರೀಕ್ಷಿಸಲು ಆಗುವುದಿಲ್ಲ ಎಂದು ಕೌಂಟರ್ ಕೊಟ್ಟಿದ್ದಾರೆ. ಈ ಬೆಳವಣಿಗೆಯು ರಾಜ್ಯ ರಾಜಕೀಯದಲ್ಲಿ ಹೊಸ ವಾಗ್ಯುದ್ಧಕ್ಕೆ ಕಾರಣವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
