ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿ ಅಧ್ಯಕ್ಷರುಗಳು, ಉಪಾಧ್ಯಕ್ಷರ ನೇಮಕ ತಮ್ಮ ದೆಹಲಿ ಭೇಟಿ ಯಾತ್ರೆಯ ಸಂದರ್ಭದಲ್ಲಿ ತೀರ್ಮಾನವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ತಿಂಗಳ ೨೫ ಮತ್ತು ೨೬ ರಂದು ದೆಹಲಿ ಪ್ರವಾಸ ಕೈಗೊಳ್ಳುತ್ತಿದ್ದೇನೆ. ಈ ಸಂದರ್ಭದಲ್ಲಿ ವರಿಷ್ಠರ ಜತೆ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳಿಗೆ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ನೇಮಕ ಎಲ್ಲದರ ಬಗ್ಗೆಯೂ ಚರ್ಚೆ ನಡೆಸುತ್ತೇನೆ ಎಂದರು.ವರಿಷ್ಠರ ಅನುಮತಿ ಸಿಕ್ಕರೆ ದೆಹಲಿ ಭೇಟಿ ನಂತರ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿ ನೇಮಕಾತಿಗಳು ನಡೆಯಲಿವೆ ಎಂದು ಅವರು ಹೇಳಿದರು.
ಮಾಜಿ ಸಚಿವ ಈಶ್ವರಪ್ಪನವರನ್ನು ಸಚಿವ ಸಂಪುಟಕ್ಕೆ ಮತ್ತೆ ಸೇರ್ಪಡೆ ಮಾಡಿಕೊಳ್ಳುವಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗ ಅವರ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ ರಿಪೋರ್ಟ್ ಸಲ್ಲಿಕೆಯಾಗುತ್ತಿದೆ. ಮುಂದೆ ನೋಡೋಣ ಎಂದರು.
ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ನಡೆದಿರುವ ಪೈಪೋಟಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನಾನು ಹಲವು ಬಾರಿ ಹೇಳಿದ್ದೇನೆ. ಇದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಯಾರು ಮುಖ್ಯಮಂತ್ರಿಯಾಗಬೇಕು ಎನ್ನುವುದನ್ನು ಜನ ತೀರ್ಮಾನಿಸುತ್ತಾರೆ. ಅವರವರೆ ತೀರ್ಮಾನ ಮಾಡೋಕೆ ಆಗುವುದಿಲ್ಲ ಎಂದರು.
ಯಾರು ಮುಖ್ಯಮಂತ್ರಿ ಆಗಬೇಕು ಎಂಬ ಅಂತಿಮ ತೀರ್ಮಾನವನ್ನು ಜನರು ಕೈಗೊಳ್ಳುತ್ತಾರೆ. ಜನರ ತೀರ್ಮಾನಕ್ಕೂ ಮೊದಲೇ ಇವರುಗಳು ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ಮಾಡುತ್ತಿರುವುದನ್ನು ಜನ ಗಮನಿಸುತ್ತಿದ್ದಾರೆ. ಎಲ್ಲದಕ್ಕೂ ಜನ ಉತ್ತರ ಕೊಡುತ್ತಾರೆ ಎಂದು ಅವರು ಹೇಳಿದರು.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy