ಧರ್ಮಸ್ಥಳ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದಲ್ಲಿ ಅಪರೂಪದ ವಿಸ್ಮಯ ಘಟನೆಯೊಂದು ನಡೆದಿದೆ. ಬರೋಬ್ಬರಿ 26 ವರ್ಷಗಳ ಹಿಂದೆ 12 ವರ್ಷದ ಬಾಲಕನಾಗಿದ್ದಾಗ ಮನೆ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ದಿಢೀರ್ ಪತ್ತೆಯಾಗಿದ್ದು, ಹೆತ್ತ ತಾಯಿಯ ಮಡಿಲು ಸೇರಿದ್ದಾರೆ. ಆ ಮೂಲಕ ಸಾಯುವ ಮುನ್ನ ಮಗನನ್ನು ನೋಡಬೇಕೆಂಬ ತಾಯಿಯ ದಶಕಗಳ ಕನಸು ಕೊನೆಗೂ ನನಸಾಗಿದೆ.
ಧರ್ಮಸ್ಥಳದ ಅಶೋಕನಗರದ ನಿವಾಸಿಯಾಗಿದ್ದ ಸತೀಶ್ ಎಂಬಾತನೇ ಈಗ ಸಲೀಂ ಆಗಿ ಮರಳಿ ಮನೆಗೆ ಬಂದ ವ್ಯಕ್ತಿ. 2000ನೇ ಇಸವಿಯಲ್ಲಿ ಧರ್ಮಸ್ಥಳಕ್ಕೆ ಬಂದಿದ್ದ ಸರ್ಕಸ್ ತಂಡದೊಂದಿಗೆ ಸತೀಶ್ ಓಡಿಹೋಗಿದ್ದ. ಬಳಿಕ 26 ವರ್ಷಗಳ ನಂತರ ಈಗ ಆತ ಮರಳಿ ಮನೆ ಸೇರಿದ್ದಾನೆ.
ಅಂದು ಸರ್ಕಸ್ ತಂಡದೊಂದಿಗೆ ಊರು ಬಿಟ್ಟಿದ್ದ ಸತೀಶ್, ಸರ್ಕಸ್ ತಂಡದ ಜೊತೆ ದೇಶದ ವಿವಿಧೆಡೆ ಸುತ್ತಾಡಿ ಅಂತಿಮವಾಗಿ ಮಹಾರಾಷ್ಟ್ರ ಸೇರಿಕೊಂಡಿದ್ದನು. ಕಳೆದ 26 ವರ್ಷಗಳಿಂದ ಮಹಾರಾಷ್ಟ್ರದಲ್ಲೇ ನೆಲೆ ನಿಂತು ಕೆಲಸ ಮಾಡಿಕೊಂಡಿದ್ದ ಆತ, ನಿರಂತರ ದುಡಿಮೆಯ ನಡುವೆ ತನ್ನ ಸ್ವಂತ ಊರು, ಹೆತ್ತವರು ಮತ್ತು ಮಾತೃಭಾಷೆಯಾದ ತುಳು ಹಾಗೂ ಕನ್ನಡವನ್ನು ಸಂಪೂರ್ಣವಾಗಿ ಮರೆತುಹೋಗಿದ್ದನು. ಅಲ್ಲಿಯೇ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ತನ್ನ ಹೆಸರನ್ನು ‘ಸಲೀಂ ಅಬ್ದುಲ್ ಅನ್ಸಾರಿ’ ಎಂದು ಬದಲಾಯಿಸಿಕೊಂಡಿದ್ದನು. ಅಲ್ಲದೆ, ತಾಲೀಮಾ ಎಂಬಾಕೆಯನ್ನು ವಿವಾಹವಾಗಿದ್ದು, ಈ ದಂಪತಿಗೆ ಖುಷಿ ಮತ್ತು ಅಝಂ ಎಂಬ ಇಬ್ಬರು ಮಕ್ಕಳಿದ್ದಾರೆ. ಇಷ್ಟು ವರ್ಷ ಹೊರರಾಜ್ಯದಲ್ಲಿದ್ದ ಕಾರಣ ಸತೀಶ್‌ಗೆ ಈಗ ಕೇವಲ ಹಿಂದಿ ಭಾಷೆ ಮಾತ್ರ ಮಾತನಾಡಲು ಬರುತ್ತದೆ.
ಜೂನ್ 9 ರಂದು ಸಲೀಂ (ಸತೀಶ್) ತನ್ನ ಮಹಾರಾಷ್ಟ್ರದ ಸ್ನೇಹಿತರ ತಂಡದೊಂದಿಗೆ ಪ್ರವಾಸಕ್ಕಾಗಿ ಧರ್ಮಸ್ಥಳ ದೇವಸ್ಥಾನಕ್ಕೆ ಬಂದಿದ್ದನು. ಈ ವೇಳೆ ಈ ಹಿಂದೆ ಸರ್ಕಸ್ ನಡೆಯುತ್ತಿದ್ದ ಜಾಗಕ್ಕೆ ಬಂದಾಗ ಆತನಿಗೆ ಹಳೆಯ ನೆನಪುಗಳು ಹಠಾತ್ತಾಗಿ ಮರುಕಳಿಸಿವೆ. ‘ಇದೇ ನನ್ನ ಸ್ವಂತ ಊರು’ ಎಂಬ ಸತ್ಯ ಮನವರಿಕೆಯಾಗಿದೆ. ತನ್ನ ತಮ್ಮಂದಿರ ಹೆಸರುಗಳು ನೆನಪಿದ್ದ ಕಾರಣ, ಸ್ಥಳೀಯ ಅಂಗಡಿಯವರ ಬಳಿ ವಿಚಾರಿಸಿ ಕೊನೆಗೂ ತನ್ನ ಹಳೆಯ ಮನೆಯನ್ನು ಹುಡುಕಿಕೊಂಡು ಹೋಗಿದ್ದಾನೆ.
ಮನೆಯ ಬಾಗಿಲಿಗೆ ಬಂದು ನಿಂತ ಹಿರಿಯ ಮಗನನ್ನು ಕಂಡ ತಾಯಿಯ ಕಣ್ಣಲ್ಲಿ ಆನಂದಬಾಷ್ಪ ಹರಿದಿದೆ. ಮಗ ಸಿಗಲಿ ಎಂದು ಧರ್ಮಸ್ಥಳ ಮಂಜುನಾಥ ಸ್ವಾಮಿ, ಕಟೀಲು ದುರ್ಗಾಪರಮೇಶ್ವರಿ ಹಾಗೂ ಪಣೋಲಿಬೈಲ್ ದೈವಸ್ಥಾನಕ್ಕೆ ತಾಯಿ ವರ್ಷಗಳಿಂದ ಹೊತ್ತಿದ್ದ ಹರಕೆ ಕೊನೆಗೂ ಫಲಿಸಿದೆ. ಇತ್ತೀಚೆಗಷ್ಟೇ ತಾಯಿ ತನ್ನ ಉಳಿದ ಮಕ್ಕಳ ಬಳಿ “ನಾನು ಸಾಯುವ ಮುನ್ನ ನನ್ನ ಹಿರಿಯ ಮಗನನ್ನು ಒಮ್ಮೆಯಾದರೂ ನೋಡಬೇಕು, ಅವನನ್ನು ಹೇಗಾದರೂ ಕರೆತನ್ನಿ” ಎಂದು ಕಣ್ಣೀರಿಟ್ಟಿದ್ದರು. ಹೆತ್ತ ಕರುಳಿನ ಹಂಬಲಕ್ಕೆ ಓಗೊಟ್ಟಂತೆ ಮಗ ಮರಳಿ ಬಂದಿದ್ದು, ಕುಟುಂಬಸ್ಥರು ಆತನನ್ನು ಅತ್ಯಂತ ಸಂತಸದಿಂದ ಬರಮಾಡಿಕೊಂಡಿದ್ದಾರೆ. ಸದ್ಯ ಕುಟುಂಬದೊಂದಿಗೆ ಕೆಲವು ದಿನಗಳ ಕಾಲ ಸಂತಸದಿಂದ ಕಾಲ ಕಳೆದ ಸತೀಶ್, ಸದ್ಯ ಮಹಾರಾಷ್ಟ್ರಕ್ಕೆ ಮರಳಿದ್ದಾನೆ ಎಂದು ತಿಳಿದುಬಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


