ಮೈಸೂರು: ಕೇಂದ್ರ ಸರ್ಕಾರ ಜನರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಈ ಕೇಂದ್ರ ಪುರಸ್ಕೃತ ಯೋಜನೆಗಳ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಈ ಯೋಜನೆಗಳ ಅನುದಾನವನ್ನು ಶೇ.100 ರಷ್ಟು ಬಳಕೆ ಆಗುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಉಕ್ಕು ಮತ್ತು ಬೃಹತ್ ಕೈಗಾರಿಕೆ ಕೇಂದ್ರ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ಅವರು ತಿಳಿಸಿದರು.
ಇಂದು ಜಿಲ್ಲಾ ಪಂಚಾಯತ್ ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಅಭಿವೃದ್ಧಿ ಹಾಗೂ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಅವರಿಗೆ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲು ಅಗತ್ಯವಿದ್ದ ಭೂಮಿಯನ್ನು ವಶಕ್ಕೆ ಪಡೆದು ಕೆ ಐ ಡಿ ಬಿ ಅವರು ಒದಗಿಸಬೇಕು. ನಾಗನಹಳ್ಳಿ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲು ಅಗತ್ಯವಿರುವ ಭೂಮಿ ಪಡೆಯುವ ಕಾರ್ಯವನ್ನು ಪೂರ್ಣಗೊಳಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಲ ಜೀವನ್ ಮಿಷನ್ ಯೋಜನೆಯು ಪ್ರತಿ ಮನೆಗೂ ಮೂಲಕ ನೀರನ್ನು ನೀಡುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಎಲ್ಲಾ ಹಳ್ಳಿಗಳಿಗೂ ನೀರು ಒದಗಿಸಿ. ಕುಡಿಯುವ ನೀರಿನ ಗುಣಮಟ್ಟವನ್ನು ನಿಯಮಿತವಾಗಿ ಪರೀಕ್ಷೆ ಮಾಡಬೇಕು. ಅಮೃತ್ ಯೋಜನೆಯಡಿ ನಗರ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆಗೆ ಅನುಧಾನ ಬಿಡುಗಡೆ ಆಗಿದ್ದು ನಿಗದಿತ ಅವಧಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಿ ನೀರಿನ ಪೂರೈಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಉತ್ಪಾದನೆ, ವ್ಯಾಪಾರ ಸೇವೆ ಹಾಗೂ ಕೃಷಿಗೆ 10 ಲಕ್ಷದವರೆಗೆ ಸಾಲ ನೀಡಲಾಗುತ್ತಿದೆ. ಇದರಲ್ಲಿ ಜಿಲ್ಲೆಗೆ ಈ ವರ್ಷ 2902 ಕೋಟಿ ಸಾಲ ನೀಡಲಾಗಿರುವ ಕುರಿತು ಲೀಡ್ ಬ್ಯಾಂಕ್ ಮ್ಯಾನೇಜರ್ ಇಂದ ಮಾಹಿತಿ ಪಡೆದ ಅವರು ಈ ಯೋಜನೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ ಎಂದರು.
ರೈತರು ದೇಶದ ಬೆನ್ನೆಲುಬು. ಅತಿಯಾದ ಮಳೆಯಿಂದ ಆದ ಬೆಳೆ ಹಾನಿಗೆ ಪರಿಹಾರವನ್ನು ಅರ್ಹರಿಗೆ ವಿತರಣೆ ಮಾಡಬೇಕು. ಪ್ರಧಾನ ಮಂತ್ರಿ ಪಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಲು ರೈತರಿಗೆ ಉತ್ತೇಜನ ನೀಡಬೇಕು. ಇದರಿಂದ ಬೆಳೆ ನಷ್ಟ ಉಂಟಾದರೆ ಬೆಳೆ ಪರಿಹಾರ ಪಡೆಯಲು ಸಾಧ್ಯವಾಗುತ್ತದೆ. ಹತ್ತಿ ಬೆಳೆಗೆ ಉತ್ತಮ ತಳಿಯ ಬಿತ್ತನೆ ಬೀಜ ಬಂದಿದ್ದು, ರಾಯಚೂರು ಭಾಗದಲ್ಲಿ ಬಿತ್ತನೆ ಆಗುತ್ತಿದೆ. ಇದರಿಂದ ಶೇಕಡಾ 50% ಉತ್ಪಾದನೆ ಹೆಚ್ಚಾಗುತ್ತದೆ. ಈ ಬಗ್ಗೆ ಅಧ್ಯಯನ ಮಾಡಿ ಹೆಚ್ ಡಿ ಕೋಟೆ ಭಾಗದ ಜನರಿಗೆ ಮಾಹಿತಿ ನೀಡುವಂತೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು. ಜಾನುವಾರುಗಳಿಗೆ ನಿಗದಿತ ಅವಧಿಯಲ್ಲಿ ಕಾಲುಬಾಯಿ, ಚಪ್ಪೆ ರೋಗದ ಲಸಿಕೆ ನೀಡಬೇಕು. ಮೇವು ಕಿಟ್ ಗಳ ವಿತರಣೆ ಮಾಡುವ ಮೂಲಕ ಜಾನುವಾರು ಮೇವು. ಕೊರತೆ ಆಗದಂತೆ ನೋಡಿಕೊಳ್ಳಬೇಕು. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕ ರಾಜ್ಯದಲ್ಲಿ ಅರಣ್ಯ ಪ್ರದೇಶ ಕಡಿಮೆ ಆಗುತ್ತಿದೆ ಎಂದು ಸರ್ವೆಗಳು ಹೇಳುತ್ತಿವೆ. ಆದರೆ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಪ್ರತಿ ವರ್ಷ 1 ಕೋಟಿಯಷ್ಟು ಗಿಡಗಳನ್ನು ನೀಡುತ್ತಾ ಇದ್ದಾರೆ ಆದರೆ ಇವುಗಳ ಪೋಷಣೆ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಮುಖವಾಗಿ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಅಂತಹ ಯುವಕರಿಗೆ ಕೇಂದ್ರ ಸರ್ಕಾರದ ಹಲವು ಯೋಜನೆಗಳ ಮೂಲಕ ಸೌಲಭ್ಯ ಗಳನ್ನು ಕಲ್ಪಿಸಿ ಸ್ವಯಂ ಉದ್ಯೋಗ ಮಾಡಲು ಅಧಿಕಾರಿಗಳು ಅವಕಾಶ ಕಲ್ಪಿಸಬೇಕು ಎಂದರು.
ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರಾದ ಸುನೀಲ್ ಬೋಸ್ ಅವರು ಮಾತನಾಡಿ, ಚಾಮರಾಜನಗರ ದಿಂದ ಮೈಸೂರು ರೈಲ್ವೆ ಮಾರ್ಗವನ್ನು ಮೇಲ್ದರ್ಜೆ ಗೆ ಏರಿಸಿ ವಿದ್ಯುಧಿಕರಣ ಮಾಡಲು ಅಗತ್ಯವಾದ ಎನ್ ಓ ಸಿ ಯನ್ನು ಪಡೆದು ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹೆಚ್ ಡಿ ಕೋಟೆಯಿಂದ ಬಾವಲಿ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚು ಇದ್ದು ಈಗಿರುವ ಎಸ್ ಹೆಚ್ ರಸ್ತೆಯನ್ನು ಎನ್ ಹೆ ರಸ್ತೆ ದರ್ಜೆಗೆ ಏರಿಸಲು ಪ್ರಪೋಸಲ್ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಮೃತ್ ಯೋಜನೆಯಡಿ ಪೈಪ್ ಲೈನ್ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಮಾಡಬೇಕು. ಕೆಲವು ಕಡೆ ಪೈಪ್ ಲೈನ್ ಮೇಲೆ ಮಾಡಿರುತ್ತಾರೆ. ಕೆಲವು ಕಡೆ ಪೈಪ್ ಲೈನ್ ಗುಂಡಿಗಳನ್ನು ಸರಿಯಾಗಿ ಮುಚ್ಚಿರುವುದಿಲ್ಲ ಎಂದು ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಟೆಂಡರ್ ಪಡೆದವರು 5 ವರ್ಷ ಅದರ ಮೆಂಟೇನ್ಸ್ ಮಾಡಬೇಕು ಈ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಬೇಕು.
ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ ಡಿ ಹರೀಶ್ ಗೌಡ ಅವರು ಮಾತನಾಡಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಫಲಾನುಭವಿಗಳ ಆಯ್ಕೆ ಮಾಡಿ ಅಪ್ರೂವ್ ಆಗಿದ್ದರೂ ಸಹ ಬ್ಯಾಂಕ್ ಗಳು ಸಾಲ ನೀಡುತ್ತಿಲ್ಲ. ಲೀಡ್ ಬ್ಯಾಂಕ್ ಮ್ಯಾನೇಜರ್ ಈ ನಿಟ್ಟಿನಲ್ಲಿ ಪರಿಶೀಲಿಸಿ ಸಾಲ ನೀಡುವಂತೆ ಕ್ರಮವಹಿಸಬೇಕು.
ಜಿಲ್ಲಾಧಿಕಾರಿ ಗಳಾದ ಜಿ.ಲಕ್ಷ್ಮೀಕಾಂತ ರೆಡ್ಡಿ ಅವರು ಮಾತನಾಡಿ, ಏರ್ಪೋರ್ಟ್ ಅಥಾರಿಟಿ ಅವರು 500 ಕೋಟಿಗಳ ವೆಚ್ಚದಲ್ಲಿ ಏರ್ಪೋರ್ಟ್ ಬೈಪಾಸ್ ರಸ್ತೆ ನಿರ್ಮಿಸಲು ನ್ಯಾಶನಲ್ ಹೈವೇ ಅಥಾರಿಟಿ ಅವರಿಗೆ ನೀಡಲು ಇದ್ದಾರೆ. ಆದರೆ ಇದರ ವೆಚ್ಚ 800 ಕೋಟಿ ಆಗುವುದಾಗಿ ವರದಿ ನೀಡಿರುತ್ತಾರೆ. ಏರ್ ಪೋರ್ಟ್ ಆಫ್ ಅಥಾರಿಟಿ ಇಂಡಿಯಾ ಅವರಿಗೆ ಅಗತ್ಯವಿದ್ದ ಭೂಮಿಯಲ್ಲಿ ಈಗಾಗಲೇ 150 ಎಕರೆ ಕೆ ಐ ಡಿ ಬಿ ವಶಕ್ಕೆ ಪಡೆದಿದ್ದು ಉಳಿದ 40 ಎಕರೆ ಪಡೆಯಲು ಪ್ರಗತಿ ಹಂತದಲ್ಲಿ ಇದೆ.
ಸಭೆಯಲ್ಲಿ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಹರೀಶ್ ಗೌಡ, ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀವತ್ಸ, ಜಿಲ್ಲಾಧಿಕಾರಿಗಳಾದ ಜಿ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ ಎಂ ಗಾಯತ್ರಿ, ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx