ಔರಾದ್ (ಬೀದರ್ ಜಿಲ್ಲೆ): ಸರ್ಕಾರದ ಜನಪರ ಯೋಜನೆಗಳು ತಳಮಟ್ಟದ ಜನರಿಗೆ ತಲುಪಿದಾಗ ಅವು ಯಾವ ರೀತಿಯ ಸಕಾರಾತ್ಮಕ ಬದಲಾವಣೆ ತರಬಹುದು ಎಂಬುದಕ್ಕೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಮಹಾರಾಜವಾಡಿ ಗ್ರಾಮದ ಮಹಿಳಾ ಕಾರ್ಮಿಕರು ಅತ್ಯುತ್ತಮ ಉದಾಹರಣೆಯಾಗಿದ್ದಾರೆ. ಸರ್ಕಾರದ ಉದ್ಯೋಗ ಖಾತರಿ ಯೋಜನೆಯೊಂದಿಗೆ ಉಚಿತ ಸಾರಿಗೆ ಸೌಲಭ್ಯವು ಇವರ ದಿನನಿತ್ಯದ ಬದುಕಿಗೆ ದೊಡ್ಡ ಮಟ್ಟದ ನೆರವಾಗಿದೆ.
ಜಂಬಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಾರಾಜವಾಡಿ ಗ್ರಾಮದ ಸರ್ಕಾರಿ ಅರಣ್ಯ ಪ್ರದೇಶದಲ್ಲಿ ಕಳೆದ 35 ದಿನಗಳಿಂದ ವಿಬಿ–ಜಿ ರಾಮ್ ಜಿ ಯೋಜನೆಯಡಿ ಸಿಸಿಟಿ ಕಾಮಗಾರಿ ಭರಾಟೆಯಿಂದ ನಡೆಯುತ್ತಿದೆ. ಗ್ರಾಮದಿಂದ ಸುಮಾರು ಎರಡು ಕಿ.ಮೀ. ದೂರದಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ, ಕೆಲಸಕ್ಕೆ ತೆರಳುವ ಮಹಿಳಾ ಕಾರ್ಮಿಕರು ಸಾರಿಗೆ ವ್ಯವಸ್ಥೆಯನ್ನು ಅತ್ಯಂತ ಸಮರ್ಥವಾಗಿ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಬೆಳಿಗ್ಗೆ 8 ಗಂಟೆ ಸುಮಾರಿಗೆ ಗ್ರಾಮಕ್ಕೆ ಬರುವ ಸರ್ಕಾರಿ ಬಸ್ ನಲ್ಲಿ ಮಹಿಳಾ ಕಾರ್ಮಿಕರು ಕಾಮಗಾರಿ ಸ್ಥಳದ ಸಮೀಪಕ್ಕೆ ಪ್ರಯಾಣ ಬೆಳೆಸಿ, ಅಲ್ಲಿಂದ ಸ್ವಲ್ಪ ದೂರ ನಡೆದುಕೊಂಡು ನಿಗದಿತ ಸಮಯಕ್ಕೆ ಕೆಲಸದ ಸ್ಥಳ ತಲುಪುತ್ತಿದ್ದಾರೆ. ಸರ್ಕಾರದ ಉದ್ಯೋಗ ಯೋಜನೆಯಡಿ ಕೆಲಸ ದೊರೆತಿರುವುದರ ಜೊತೆಗೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯ ಸೌಲಭ್ಯ ದೊಡ್ಡ ಉಪಶಮನ ನೀಡಿದೆ.
ಈ ಕುರಿತು ಮಾತನಾಡಿರುವ ಮಹಿಳಾ ಕಾರ್ಮಿಕರು, ಸರ್ಕಾರದ ಮೂಲಕ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಕೆಲಸಕ್ಕೆ ತೆರಳಿ, ಸ್ವಂತ ಗ್ರಾಮದಲ್ಲಿಯೇ ಉದ್ಯೋಗ ಪಡೆಯುತ್ತಿದ್ದೇವೆ ಹಾಗೂ ಇದರಿಂದ ದೂರದ ಊರುಗಳಿಗೆ ಉದ್ಯೋಗ ಅರಸಿ ವಲಸೆ ಹೋಗುವ ಅಗತ್ಯ ಕಡಿಮೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಮಹಿಳೆಯರು ಸರ್ಕಾರದ ವಿವಿಧ ಯೋಜನೆಗಳನ್ನು ತಮ್ಮ ದೈನಂದಿನ ಬದುಕಿಗೆ ಅಳವಡಿಸಿಕೊಳ್ಳುತ್ತಿರುವುದು ನಿಜಕ್ಕೂ ಮಾದರಿಯಾಗಿದೆ.
ಮಹಾರಾಜವಾಡಿಯಲ್ಲಿ ನಡೆಯುತ್ತಿರುವ ಈ ಕಾಮಗಾರಿಯಲ್ಲಿ ಮಹಿಳೆ ಮತ್ತು ಪುರುಷರಿಗೆ ಸಮಾನ ಕೂಲಿ ನೀಡಲಾಗುತ್ತಿದ್ದು, ಪ್ರಸ್ತುತ ದಿನಕ್ಕೆ 382 ರೂಪಾಯಿಗಳಂತೆ ಕೂಲಿ ನಿಗದಿಪಡಿಸಲಾಗಿದೆ ಎಂದು ಜಂಬಗಿ ಗ್ರಾಪಂ ಪಿಡಿಒ ದಿನೇಶ್ ರೆಡ್ಡಿ ಮಾಹಿತಿ ನೀಡಿದ್ದಾರೆ. ಕಾರ್ಮಿಕರ ಹಾಜರಾತಿ ಹಾಗೂ ಕಾಮಗಾರಿಯ ಪ್ರಕ್ರಿಯೆಯನ್ನು ಪರಿಗಣಿಸಿ, ಕೂಲಿ ಹಣವನ್ನು ಹಂತ ಹಂತವಾಗಿ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತಿದ್ದು, ಕಾರ್ಮಿಕರು ಸರ್ಕಾರದ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಗುಣಮಟ್ಟದ ಕಾಮಗಾರಿ ನಿರ್ವಹಿಸಬೇಕು ಎಂದು ಅವರು ಕರೆ ನೀಡಿದ್ದಾರೆ.
ವರದಿ: ಅರವಿಂದ ಮಲ್ಲೀಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
