ಬೀದರ್: ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬೆಳಕುಣಿ ಚೌದ್ರಿ ಗ್ರಾಮ ಪಂಚಾಯಿತಿ ಎದುರು ನಾಲಾ ಟಿರ್ನಿಂಗ್ ಹಾಗೂ ಪಿಂಚಿಂಗ್ ಕಾಮಗಾರಿ ಕುರಿತು ಮಾಹಿತಿ ನೀಡುವಂತೆ ಆಗ್ರಹಿಸಿ ಮಂಗಳವಾರ ಧರಣಿ ನಡೆಸುತ್ತಿದ್ದ ಜಾವಿದ್ ಶರ್ಪು ದಿನ್ ಅವರು ಸುಡು ಬಿಸಿಲಿನಲ್ಲಿ ಅಸ್ವಸ್ಥಗೊಂಡು ಬಿದ್ದ ಘಟನೆ ನಡೆದಿದೆ.
ಬೆಳಕುಣಿ ಚೌದ್ರಿ ಗ್ರಾಮದ ಸರ್ವೇ ನಂಬರ್ 55ರಲ್ಲಿ ಯಾವುದೇ ನಾಲಾ ಟಿರ್ನಿಂಗ್ ಹಾಗೂ ಪಿಂಚಿಂಗ್ ಕಾಮಗಾರಿ ನಡೆಸದೆ ಕಾಗದದಲ್ಲಿ ಹಣ ಎತ್ತಿಕೊಳ್ಳಲಾಗಿದೆ ಎಂದು ಜಾವಿದ್ ಆರೋಪಿಸಿದ್ದಾರೆ. ತಮ್ಮ ಹೊಲವಿರುವ ಈ ಪ್ರದೇಶದಲ್ಲಿ 2.27 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ನಡೆದಿದೆ ಎಂದು ಹೇಳಲಾಗುತ್ತಿದೆಯಾದರೂ, ನೆಲಮಟ್ಟದಲ್ಲಿ ಅಂತಹ ಯಾವುದೇ ಕಾಮಗಾರಿ ಆಗಿಲ್ಲ ಎಂದು ಅವರು ದೂರಿದ್ದಾರೆ.
ಈ ಕುರಿತು ಸಂಪೂರ್ಣ ಲಿಖಿತ ಮಾಹಿತಿ ನೀಡುವಂತೆ ಆಗ್ರಹಿಸಿ ಬೆಳಿಗ್ಗೆಯಿಂದಲೇ ಅವರು ಗ್ರಾಮ ಪಂಚಾಯಿತಿ ಎದುರು ಧರಣಿ ಆರಂಭಿಸಿದ್ದರು. ಮಧ್ಯಾಹ್ನದ ವೇಳೆಗೆ ತೀವ್ರ ಬಿಸಿಲಿನ ತಾಪಕ್ಕೆ ಬಳಲಿದ ಅವರು ಏಕಾಏಕಿ ಅಸ್ವಸ್ಥಗೊಂಡು ಕುಸಿದು ಬಿದ್ದರು. ಇದರಿಂದ ಕೆಲಕಾಲ ಪಂಚಾಯಿತಿ ಸಿಬ್ಬಂದಿ ಆತಂಕಗೊಂಡಿದ್ದು, ಕೂಡಲೇ ಜಾವಿದ್ ಅವರಿಗೆ ನೀರು ಕುಡಿಸಿ ಸಮಾಧಾನಪಡಿಸಿದರು.
ಸ್ಥಳಕ್ಕೆ ಆಗಮಿಸಿದ ಪ್ರಭಾರ ಪಿಡಿಒ ಶರಣಪ್ಪ ಗಾದ್ದಗೆ ಮಾತನಾಡಿ, 2022-23ನೇ ಸಾಲಿನಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನಾಲಾ ಟಿರ್ನಿಂಗ್ ಹಾಗೂ ಪಿಂಚಿಂಗ್ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಅಲ್ಲದೆ, ಜಾವಿದ್ ಅವರು ಕೇಳಿರುವ ಮಾಹಿತಿಯನ್ನು 21 ದಿನಗಳೊಳಗೆ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಈ ಕಾಮಗಾರಿಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಸಮಗ್ರ ತನಿಖೆ ಕೈಗೊಳ್ಳಬೇಕು ಎಂದು ಜಾವಿದ್ ಶರ್ಪು ದಿನ್ ಒತ್ತಾಯಿಸಿದ್ದಾರೆ. ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹಾಗೂ ಬೀದರ್ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲರಾವ್ ಅವರು ಈ ಕಡೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
