ತುಮಕೂರು: ದಲಿತರು ತಮ್ಮ ಜಮೀನುಗಳಿಗೆ ಹಾದು ಹೋಗುತ್ತಿರುವ ರಸ್ತೆಗಳನ್ನ ಬಲಾಢ್ಯರು ಅಡ್ಡಿಪಡಿಸಿ ಒತ್ತುವರಿ ಮಾಡಿಕೊಳ್ಳುತ್ತಿದ್ದು, ಒತ್ತುವರಿ ತೆರವುಗೊಳಿಸುವಲ್ಲಿ ಕಂದಾಯ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ದಲಿತ ಸಂಘಟನೆಗಳ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿತು.
ಕುಣಿಗಲ್ ತಾಲೂಕಿನ ತರೆದಕುಪ್ಪೆ, ಬೆಣಚಕಲ್ಲು, ಆರ್. ಬ್ಯಾಡರಹಳ್ಳಿ, ಇಪ್ಪಾಡಿ, ಗುನ್ನಾಗೆರೆ, ಕೊಡವತ್ತಿ, ಬ್ಯಾಡರಹಳ್ಳಿ, ತೊರೆಹಳ್ಳಿ, ಶೆಟ್ಟಿಗೆಹಳ್ಳಿ, ಚನ್ನಾಪುರ, ಮಲ್ಲಾಪುರ ಮತ್ತಿತರೆ ಗ್ರಾಮಗಳಲ್ಲಿ ದಲಿತರು ತಮ್ಮ ಪೂರ್ವಜರ ಕಾಲದಿಂದಲೂ ತಮ್ಮ ಜಮೀನುಗಳಿಗೆ ಹಾದು ಹೋಗುತ್ತಿದ್ದ ರಸ್ತೆಗಳನ್ನು ಏಕಾಏಕಿ ಅತಿಕ್ರಮ ಪ್ರವೇಶ ಮಾಡಿ ಬಲಾಢ್ಯರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬಲಾಢ್ಯರು — ರಸ್ತೆ ಒತ್ತುವರಿ ಮಾಡಿಕೊಂಡಿರುವುದರಿಂದ ದಲಿತರು ತಮ್ಮ ಜಮೀನಿನಲ್ಲಿ ಉಳುಮೆಗೆ, ಬಿತ್ತನೆಗೆ ಮತ್ತು ಕಟಾವು ಕೆಲಸಗಳನ್ನು ಮಾಡಕು ತೊಂದರೆ ಅನುಭವಿಸುತ್ತಿದ್ದು, ತರೇದಕುಪ್ಪೆ ಮತ್ತು ಬೆಣಚಕಲ್ಲು ಗ್ರಾಮದಲ್ಲಿ ಬೆಳೆದ ಬೆಳೆಗಳು ದನಕರುಗಳ ಪಾಲಾಗಿ ಉಳಿದ ಬೆಳೆ ನಾಶವಾಗಿ ಹೋಗುತ್ತಿದೆ. ಕೆಲವು ಗ್ರಾಮಗಳಲ್ಲಿ ರಸ್ತೆ ಇಲ್ಲದೆ ಮಕ್ಕಳು ಶಾಲೆಗೆ ಹೋಗಲು ದಲಿತರು ತಮ್ಮ ಮನೆಗಳಿಗೆ ತಿರುಗಾಡಲು ತೊಂದರೆ ಉಂಟಾಗಿದೆ. ಅಧಿಕಾರಿಗಳಿಗೆ ಸಾಕಷ್ಟು ಬಾರಿ ದೂರು ನೀಡಿ, ಒತ್ತುವರಿ ತೆರವುಗೊಳಿಸಿ ಕೊಡಬೇಕೆಂದು ಮನವಿ ಮಾಡುತ್ತಾ ಬಂದಿದ್ದರೂ, ಯಾವುದೇ ಪ್ರಯೋಜನವಾಗಿರುವುದಿಲ್ಲ, ಜಿಲ್ಲಾ ಹಾಗೂ ಉಪವಿಭಾಗ ಮತ್ತು ತಾಲ್ಲೂಕು ಮಟ್ಟದ ಪ.ಜಾ/ಪ.ಪಂ. ಹಿತ ರಕ್ಷಣಾ ಸಮಿತಿ ಸಭೆಯಲ್ಲೂ ವಿಷಯ ಚರ್ಚೆಗೆ ಬಂದು ತಿಂಗಳ ಒಳಗಾಗಿ ಒತ್ತುವರಿ ತೆರವುಗೊಳಿಸುತ್ತೇವೆ ಎಂದು ಭರವಸೆ ನೀಡಿದ್ದ ಅಧಿಕಾರಿಗಳು ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸಂಘಟನೆಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳು ಉದಾಸೀನತೆ ಮತ್ತು ಕರ್ತವ್ಯ ನಿರ್ಲಕ್ಷತೆ ತೋರಿದ್ದರಿಂದ ಮೊದಲೇ ಆರ್ಥಿಕವಾಗಿ ಹಿಂದುಳಿದಿರುವ ದಲಿತ ಕುಟುಂಬಗಳು ಇರುವ ಅಲ್ಪಸ್ವಲ್ಪ ಜಮೀನಿನಲ್ಲಿ ಬೆಳೆ ಬೆಳೆಯಲಾಗದೆ ಮತ್ತು ಬೆಳೆದ ಬೆಳೆ ಕಟಾವು ಮಾಡಲಾಗದೆ ತೊಂದರೆ ಅನುಭವಿಸುತ್ತಾ, ಸ್ವಾಭಿಮಾನದ ಬದುಕು ಕಳೆದುಕೊಂಡು ಮತ್ತಷ್ಟು ಆರ್ಥಿಕವಾಗಿ ಹಿಂದುಳಿಯಲು ಕಾರಣವಾಗುತ್ತಿದೆ ಎಂದು ಪ್ರತಿಭಟನಾಕಾರರು ಬೇಸರ ವ್ಯಕ್ತಪಡಿಸಿದರು.
ಬಲಾಢ್ಯರ ಕಿರುಕುಳ ಅಧಿಕಾರಿಗಳ ಕರ್ತವ್ಯ ನಿರ್ಲಕ್ಷತೆ ಮತ್ತು ಉದಾಸೀನತೆ ಯಿಂದ ದಲಿತರು ಎರಡು ವರ್ಷಗಳಿಂದ ತತ್ತರಿಸಿ ಹೋಗಿರುವುದಲ್ಲದೆ, ನೆಮ್ಮದಿ ಇಲ್ಲದೆ ಬದುಕುವಂತಾಗಿದೆ. ಇಂತಹ ಪರಿಸ್ಥಿತಿಗೆ ಕಾರಣರಾದ ಅಧಿಕಾರಿಗಳ ಆಡಳಿತ ವ್ಯವಸ್ಥೆಗೆ ನಮ್ಮ ಧಿಕ್ಕಾರವಿರಲಿ, ಇಂತಹ ಪರಿಸ್ಥಿತಿ ನಿರ್ಮಾಣವಾಗಲು ಕಾರಣರಾದ ಬಲಾಢ್ಯ ಸಮಾಜದ ಕೆಲವು ವ್ಯಕ್ತಿಗಳ ಹಾಗೂ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಒತ್ತುವರಿಯಾಗಿರುವ ರಸ್ತೆಯನ್ನು ತೆರವುಗೊಳಿಸಿ ದಲಿತರಿಗೆ ನ್ಯಾಯ ಒದಗಿಸ ಬೇಕೆಂಬುದೇ ದಲಿತ ಸಂಘಟನೆಗಳ ಒಕ್ಕೂಟದ ಪ್ರತಿಭಟನಾ ಧರಣಿಯ ಉದ್ದೇಶವಾಗಿದೆ. ತೆರವುಗೊಳಿಸದೇ ಮತ್ತೆ ವಿಳಂಬ ಮಾಡಿದ್ದಲ್ಲಿ ತೀವ್ರ ತರಹದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಹಕ್ಕೊತ್ತಾಯಗಳು :
* ದಲಿತರು ಬಹುಕಾಲದಿಂದ ಹಾದು ಹೋಗುತ್ತಿದ್ದ ನಕಾಶೆ ಕಂಡ ಕಾಲುದಾರಿ, ಬಂಡಿ ದಾರಿ, ಅಥವಾ ರೂಢಿಗತ ರಸ್ತೆಗಳನ್ನು ಏಕಏಕಿ ಒತ್ತುವರಿ ಮಾಡಿಕೊಂಡು ದಲಿತರು ತಮ್ಮ ಜಮೀನುಗಳಿಗೆ ಹೋಗಲು ಅಡ್ಡಿಪಡಿಸಿ ದೌರ್ಜನ್ಯ ವ್ಯಸಗಿರುವ ಬಲಾಢ್ಯರ ವಿರುದ್ಧ ಪ.ಜಾ ಮತ್ತು ಪ.ಪಂ, ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು.
* ಕಂದಾಯ ಹಾಗೂ ಭೂಮಾಪನ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲಿಸಿ ರಸ್ತೆ ಇದೆ ಅಥವಾ ರಸ್ತೆ ಇಲ್ಲಾ ಎಂದು ಖಾತರಿ ಪಡಿಸುವವರೆಗೂ ಮತ್ತು ಪರ್ಯಾಯ ರಸ್ತೆ ಮಾಡಿಕೊಡುವವರೆಗೂ ಬಲಾಢ್ಯರು ಒತ್ತುವರಿ ಮಾಡಿಕೊಂಡಿರುವ ರಸ್ತೆಯನ್ನ ಕೂಡಲೇ ತೆರವುಗೊಳಿಸಿ ದಲಿತ ಕುಟುಂಬಗಳು ತಮ್ಮ ಜಮೀನುಗಳಿಗೆ ಹಾದು ಹೋಗಲು ಅವಕಾಶ ಮಾಡಿಕೊಡಬೇಕು.
* ಕಾಲಮಿತಿಯಲ್ಲಿ ದಲಿತರ ಸಮಸ್ಯೆಗಳನ್ನು ಬಗೆಹರಿಸದೆ ವಿನಾಕಾರಣ ಉದಾಸಿನತೆ ತೋರಿ ಕರ್ತವ್ಯ ಲೋಪವೆಸಗಿ ಬೆಳೆ ಹಾಳಾಗಲು ಕಾರಣರಾದ ಅಧಿಕಾರಿಗಳ ವಿರುದ್ಧ ಪ.ಜಾ/ಪ.ಪಂ. ದೌರ್ಜನ್ಯ ತಡೆಯ ಕಾಯ್ದೆ 1989 ಸೆಕ್ಷನ್ 4ರ ಅಡಿ ಪ್ರಕರಣ ದಾಖಲಿಸಬೇಕು.
* ದೌರ್ಜನ್ಯಕ್ಕೊಳಗಾಗಿ ಬೆಳೆದ ಬೆಳೆ ಕಳೆದುಕೊಂಡ ದಲಿತ ಕುಟುಂಬಗಳಿಗೆ ಬೆಳೆ ನಷ್ಟದ ಪರಿಹಾರ ಕೊಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx