ಬೆಂಗಳೂರು: ವಿದ್ಯಾರ್ಥಿಗಳು ಎಂದಿಗೂ ತಾವು ಬೆಳೆದು ಬಂದ ಹಾಗೂ ಬೆಳೆಯುವ ದಾರಿ ಮರೆಯಬಾರದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕಿವಿಮಾತು ಹೇಳಿದರು.
ನಗರದ ಯಲಹಂಕದಲ್ಲಿರುವ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಆವರಣದಲ್ಲಿ ಡಾ. ರಾಮದಾಸ್ ಎಂ ಪೈ ಸಮ್ಮೇಳನ ಸಭಾಂಗಣ ಹಾಗೂ ಫುಡ್ ಕೋರ್ಟ್ ಉದ್ಘಾಟಿಸಿ ಮಾತನಾಡಿದ ಅವರು ಹೇಳಿದ್ದಿಷ್ಟು , “ಜೀವನದಲ್ಲಿ ಶಿಸ್ತು, ಸಂಯಮ, ಶ್ರದ್ಧೆ ಮೈಗೂಡಿಸಿಕೊಂಡರೆ ಯಾವುದೇ ಕೆಲಸಗಳು ಕಠಿಣವಲ್ಲ. ಸುಲಭವಾಗಿ ಗುರಿ ಮುಟ್ಟಬಹುದು. ಕೇವಲ ಧನಾತ್ಮಕ ಚಿಂತನೆಗಳ ಬಗ್ಗೆ ಯೋಚಿಸಬೇಕೆ ಹೊರತು, ನಕಾರಾತ್ಮಕ ಚಿಂತನೆಗಳ ಕುರಿತು ಒಂದು ಕ್ಷಣವೂ ಯೋಚಿಸಬಾರದು.
ಮಹಾತ್ಮ ಗಾಂಧಿ ಅವರು ಹೇಳುತ್ತಾರೆ, “ನೀವು ನಿಮ್ಮನ್ನು ನಿಯಂತ್ರಣ ಮಾಡಿಕೊಳ್ಳಲು ನಿಮ್ಮ ಮೆದುಳನ್ನು ಬಳಸಿ, ಇತರರನ್ನು ನಿಯಂತ್ರಿಸಲು ಹೃದಯವನ್ನು ಬಳಸಿ” ಎಂದು. ಯಾವುದೇ ಕಾರಣಕ್ಕೂ ಇತರೇ ವಿಚಾರಗಳಿಂದ ಕಲುಷಿತರಾಗಬೇಡಿ, ಸ್ವಂತ ಆಲೋಚನೆ ಬೆಳೆಸಿಕೊಳ್ಳಿ. ಈ ದೇಶದಲ್ಲಿ ಹುಟ್ಟಿರುವುದು ನಮ್ಮೆಲ್ಲರ ಪುಣ್ಯ.
ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನ ಸಂಪದಂ. ಶತ್ರುಬುದ್ಧಿವಿನಾಶಾಯ ದೀಪಜ್ಯೋತಿ ನಮೋಸ್ತುತೇ ಎನ್ನುವ ಶ್ಲೋಕವನ್ನು ಹೇಳಿ ದೀಪ ಬೆಳಗಿಸುತ್ತೇವೆ.
ಇಂದಿನ ವಿದ್ಯಾರ್ಥಿಗಳು ಹುಟ್ಟುಹಬ್ಬ ಆಚರಣೆ ವೇಳೆ, ದೀಪವನ್ನು ಆರಿಸುವ ಮೂಲಕ ಸಂಭ್ರಮಿಸುತ್ತಿದ್ದಾರೆ. ನಾವು ದೀಪ ಬೆಳಗುವವರಾಗಬೇಕೆ ಹೊರತು, ದೀಪ ಆರಿಸುವವರಾಗಬಾರದು.
ಎಸ್.ಎಂ.ಕೃಷ್ಣ ಅವರ ಸಂಪುಟದಲ್ಲಿ ಸಹಕಾರ ಸಚಿವನಾಗಿ ಕೆಲಸ ಮಾಡುತ್ತಿದ್ದೆ. ಆ ವೇಳೆ ಅಂತರರಾಷ್ಟ್ರೀಯ ಮಟ್ಟದ ಸಹಕಾರಿ ಸಮ್ಮೇಳನ ಆಯೋಜಿಸಲಾಗಿತ್ತು. ನಾನು ಈ ಸಭೆಗೆ ಆಹ್ವಾನಿತನಾಗಿ ಹೋಗಿದ್ದ ನಾನು, ಸಮ್ಮೇಳದ ಪ್ರಮುಖರೊಬ್ಬರಿಗೆ ನನ್ನ ಪರಿಚಯ ಮಾಡಿಕೊಂಡು ಮಾತನಾಡುತ್ತಿದ್ದೆ, ಅವರಿಗೆ ನನ್ನ 39 ನೇ ಹುಟ್ಟುಹಬ್ಬ ಎಂದು ಗೊತ್ತಾಯಿತು. ಕೂಡಲೇ ಹುಟ್ಟುಹಬ್ಬ ಆಚರಿಸಲೇ ಬೇಕು ಎಂದು, ನನಗೆ ಗೊತ್ತಾಗದಂತೆ ಆಯೋಜನೆ ಮಾಡಿದರು.
ಕೇಕ್ ಆರ್ಡರ್ ಮಾಡಿ, ಕ್ಯಾಂಡಲ್ ಇಟ್ಟು, ನನ್ನ ಕರೆದರು, ನಾನು ಕ್ಯಾಂಡಲ್‌ಅನ್ನು ಆರಿಸಬೇಕು ಎಂದು ಹೋಗುವಷ್ಟರಲ್ಲಿ, ವ್ಯಕ್ತಿಯೊಬ್ಬ ‘ಇದು ನಮ್ಮ ಸಂಸ್ಕೃತಿಯಲ್ಲ’ ಎಂದು ಜೋರಾಗಿ ಕೂಗಿಕೊಂಡನು. ಅಂದು ನನ್ನ ಅರಿವಿಗೆ ಬಂದಿತು, ನಮ್ಮದು ದೀಪವನ್ನು ಹಚ್ಚುವ ಸಂಸ್ಕೃತಿ, ಆರಿಸುವ ಸಂಸ್ಕೃತಿಯಲ್ಲ ಎಂದು.
ಮಣಿಪಾಲ್ ಸಮೂಹ ಸಂಸ್ಥೆ ಇಡೀ ರಾಜ್ಯದಲ್ಲೇ ಅತ್ಯಂತ ಪ್ರಮುಖವಾದ ಶಿಕ್ಷಣ ಸಂಸ್ಥೆ. ನಾನು ರಾಜ್ಯದ ಉಪಮುಖ್ಯಮಂತ್ರಿಯಾಗಿ ಈ ಮಾತುಗಳನ್ನು ಹೇಳುತ್ತಿಲ್ಲ, ಶಿಕ್ಷಣ ಪ್ರೇಮಿಯಾಗಿ ಹೇಳುತ್ತಿದ್ದೇನೆ.
ಸಹಕಾರಿ ಕ್ಷೇತ್ರದಿಂದ ಬಂದು ನೊಬಲ್ ಪ್ರಶಸ್ತಿ ಪುರಸ್ಕೃತರಾದ ಮೊಹಮದ್ ಯೂನಸ್ ಅವರು ಒಂದು ಮಾತು ಹೇಳುತ್ತಾರೆ “ನೀವು ಹಸಿದವನಿಗೆ ಒಂದು ದಿನ ಮಾತ್ರ ಮೀನು ನೀಡಬಹುದು, ಆದರೆ ಮೀನು ಹಿಡಿಯುವುದು ಕಲಿಸಿದರೆ ಜೀವನ ಪೂರ್ತಿ ಹಸಿವು ನೀಗಿಸದಂತೆ” ಈ ರೀತಿ ಮಣಿಪಾಲ್ ಸಂಸ್ಥೆ ಕೆಲಸ ಮಾಡುತ್ತಿದೆ.
“By Birth I am an Agriculturist By Profession I am a Businessman By Choice I am an Educationist By Passion I am a Politician, ಆದರೆ ಈ ಮಣಿಪಾಲ್ ಸಂಸ್ಥೆಗೆ ನಾನು ಒಬ್ಬ ಶಿಕ್ಷಣಪ್ರೇಮಿಯಾಗಿ ವಿದ್ಯಾರ್ಥಿಗಳನ್ನು ನೋಡಲು ಬಂದಿದ್ದೇನೆ.
ರಾಮದಾಸ್ ಪೈ ಅವರು ಈ ರಾಜ್ಯಕಂಡ ಶ್ರೇಷ್ಠ ಶಿಕ್ಷಣ ತಜ್ಞರು. ನನಗೆ ಶಿಕ್ಷಣದ ಮಹತ್ವದ ಬಗ್ಗೆ ಅರಿವಿದೆ, ಇಡೀ ಮಣಿಪಾಲ್ ಸಮೂಹ ಸಂಸ್ಥೆಗಳು ಈ ದೇಶದ, ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲೇ ಪ್ರಮುಖ ಹಾಗೂ ಆಕರ್ಷಣೀಯ ಸಂಸ್ಥೆ, ಆದ ಕಾರಣ ಅವರಿಗೆ ಅಭಿನಂದಿಸುತ್ತೇನೆ.
55 ವರ್ಷಗಳ ಹಳೆಯದಾದ ಮಣಿಪಾಲ್ ಕ್ಯಾಂಪಸ್ ಅತ್ಯಂತ ಸುಂದರವಾದ ವಾತಾವರಣ ಇಲ್ಲಿದೆ. ಇದನ್ನು ನೋಡಲು ಸಂತೋಷವಾಗುತ್ತದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜನರು ಎಲ್ಲಾ ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದಾರೆ. ಶಿಕ್ಷಣ, ವ್ಯಾಪಾರ, ಹೋಟೆಲ್ ಉದ್ಯಮ, ವೈದ್ಯಕೀಯ ಸೇರಿದಂತೆ ಪ್ರಮುಖ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಈಗಲೂ ಎರಡೂ ಜಿಲ್ಲೆಗಳು ಶಿಕ್ಷಣ ಕ್ಷೇತ್ರದಲ್ಲಿ ಮುಂದುವರೆದ ಜಿಲ್ಲೆಗಳೇ, ಆದರೆ ಕೆಲವು ವರ್ಷಗಳಿಂದ ರಾಜಕೀಯವಾಗಿ ಸಾಕಷ್ಟು ಸ್ಥಿತ್ಯಂತರಗಳು ನಡೆದು ಏರುಪೇರಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಇಡೀ ಪ್ರಪಂಚವೇ ಭಾರತದ ಕಡೆ ತಿರುಗಿ ನೋಡುತ್ತಿದೆ. ಪ್ರತಿ ಕ್ಷೇತ್ರದಲ್ಲಿ ಭಾರತೀಯರು ಗಣನೀಯ ಸಾಧನೆ ಮಾಡಿದ್ದಾರೆ, ಮಾಡುತ್ತಿದ್ದಾರೆ. ಅಷ್ಟೊಂದು ಜ್ಞಾನ ಸಂಪತ್ತು ನಮ್ಮ ದೇಶದ ಜನರಲ್ಲಿದೆ.
ಇಪ್ಪತ್ತು ವರ್ಷಗಳ ಹಿಂದೆ ಪ್ರಧಾನಿಗಳಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಕರ್ನಾಟಕಕ್ಕೆ ಬಂದಾಗ ಅವರಿಗೆ ವಿಧಾನಸೌಧಕ್ಕೆ ಆಹ್ವಾನ ನೀಡಿದ್ದೆವು. ನಾನಾಗ ನಗರಾಭಿವೃದ್ಧಿ ಸಚಿವನಾಗಿದ್ದೆ. ಈ ವೇಳೆ ಅವರ ಜೊತೆ ಮಾತನಾಡುತ್ತಿದ್ದಾಗ, “ಕರ್ನಾಟಕದ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಉನ್ನತ ಮಟ್ಟದ ಜ್ಞಾನ ನೀಡುತ್ತಿವೆ, ಏಕೆಂದರೆ ಯಾವುದೇ ದೇಶಕ್ಕೆ ಹೋದರು ಒಂದಲ್ಲ ಒಂದು ಸಂಸ್ಥೆಗಳಲ್ಲಿ ಭಾರತೀಯ ಅಥವಾ ಕನ್ನಡಿಗ ಉನ್ನತ ಸ್ಥಾನ ಅಲಂಕರಿಸಿರುತ್ತಾರೆ” ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು. ಇದು ನನ್ನ ಜೀವನದಲ್ಲಿ ಮರೆಯಲಾರದ ಘಟನೆ.
ಐಟಿ ಕ್ಷೇತ್ರದಲ್ಲಿ ದಕ್ಷಿಣ ಭಾರತೀಯರು ಹೆಚ್ಚಿಗೆ ಕೆಲಸ ಮಾಡುತ್ತಿದ್ದಾರೆ. ಅದರಲ್ಲು ಕನ್ನಡಿಗರು ಈ ಕ್ಷೇತ್ರವನ್ನು ಆವರಿಸಿಕೊಂಡು ಬಿಟ್ಟಿದ್ದಾರೆ, ಇದು ನಮ್ಮ ಶಕ್ತಿ. ಐದು ಜನರಲ್ಲಿ ಮೂರು ಜನ ಕನ್ನಡಿಗರೇ ಈ ಕ್ಷೇತ್ರದಲ್ಲೇ ದುಡಿಯುತ್ತಿದ್ದಾರೆ.
ಇಡೀ ದೇಶವನ್ನು ಕರ್ನಾಟಕದ ಮೂಲಕ ನೋಡಲಾಗುತ್ತಿದೆ. ಕರ್ನಾಟಕದಲ್ಲಿ ಶಿಕ್ಷಣ ಪಡೆಯುತ್ತಿರುವ ನೀವೆ ಧನ್ಯರು. ಹೊರ ರಾಜ್ಯಗಳ ಅನೇಕ ವಿದ್ಯಾರ್ಥಿಗಳು ಈ ಮಾತನ್ನು ಗಮನದಲ್ಲಿ ಇಟ್ಟುಕೊಂಡು ಬೆಳೆಯಬೇಕು.


