ನವದೆಹಲಿ: ವಾಟ್ಸಾಪ್ ಗೆ ನಿಷೇಧ ನಿಷೇಧ ಹೇರಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ.
ನ್ಯಾಯಮೂರ್ತಿಗಳಾದ ಎಂ.ಎಂ ಸುಂದರೇಶ್ ಹಾಗೂ ಅರವಿಂದ ಕುಮಾರ್ ಅವರಿದ್ದ ನ್ಯಾಯ ಪೀಠ ಈ ತೀರ್ಪು ನೀಡಿದೆ.
ಸರ್ಕಾರ ಹೊರಡಿಸಿರುವ ಐಟಿ ನಿಯಮಗಳನ್ನು ವಾಟ್ಸಾಪ್ ಪಾಲಿಸುತ್ತಿಲ್ಲ. ಹೀಗಾಗಿ ಅದನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರ ಓಮನ್ ಕುಟ್ಟನ್ ಕೆ.ಜಿ. ಎಂಬುವವರು ಕೇರಳ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು.
2021ರಲ್ಲಿ ಕೇರಳ ಹೈಕೋರ್ಟ್ ಅದನ್ನು ತಿರಸ್ಕರಿಸಿತ್ತು. ಅಲ್ಲದೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿತ್ತು. ಆ್ಯಪ್ ನ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಭದ್ರತೆ ಇರುವುದರಿಂದ ಸಂದೇಶಗಳ ಮೂಲವನ್ನು ಕಂಡುಹಿಡಿಯಲು ಸಾಧ್ಯವಿಲ್ಲ. ಹೀಗಾಗಿ 2021ರ ಐಟಿ ನಿಯಮಗಳಿಗೆ ಒಳಪಡುವುದಿಲ್ಲ ಎಂದು ವಾಟ್ಸಾಪ್ ದೆಹಲಿ ಹೈಕೋರ್ಟ್ ಗೆ ನೀಡಿದ ಹೇಳಿಕೆಯನ್ನು ಅರ್ಜಿದಾರರ ಕೇರಳ ಹೈಕೋರ್ಟ್ ನಲ್ಲಿ ಉಲ್ಲೇಖಿಸಿದ್ದರು.
ಇದೇ ವೇಳೆ, ‘ ಕೆಲವು ಸಂದರ್ಭಗಳಲ್ಲಿ ಬಳಕೆದಾರರು ಕಳುಹಿಸಿದ ಸಂದೇಶಗಳನ್ನು ಸಂಗ್ರಹಿಸಲಾಗುತ್ತದೆ. ಅವರ ಸಂಪರ್ಕಗಳು ಮತ್ತು ಇತರ ಮಾಹಿತಿಯನ್ನು ಪಡೆಯಲಾಗುತ್ತದೆ’ ಎನ್ನುವ ವಾಟ್ಸಾಪ್ ಗೋಪ್ಯತಾ ನೀತಿಯ ಬಗ್ಗೆಯೂ ಕೋರ್ಟ್ ಗಮನಕ್ಕೆ ತಂದಿದ್ದರು.
ವಾಟ್ಸಾಪ್ ನಲ್ಲಿ ಭದ್ರತೆ ಕೊರತೆಯಿದೆ, ರಾಷ್ಟ್ರ ವಿರೋಧಿ, ಸುಳ್ಳು ಸುದ್ದಿ ಮತ್ತು ಚಿತ್ರಗಳನ್ನು ಹರಡುವ ಸಮಾಜ ವಿರೋಧಿ ಅಂಶಗಳಿಂದ ತುಂಬಿದೆ, ನಂಬಿಕೆಯ ಕೊರತೆಯಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು. ಈ ವಾದಕ್ಕೆ ಮನ್ನಣೆ ಕೊಡದೆ, ಸುಪ್ರೀಂ ಕೋರ್ಟ್ ಅರ್ಜಿಯನ್ನು ತಳ್ಳಿ ಹಾಕಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296