ತುಮಕೂರು : ಬರೋಬರಿ 2 ಕೋಟಿ ಮೌಲ್ಯದ ಹೈಟೆಕ್ ಸರ್ಕಾರಿ ಶಾಲೆ ನಿರ್ಮಿಸಿ ತಾಯಿಯ ಶಾಲೆಯ ಋಣ ತೀರಿಸಿರುವ ಘಟನೆ ತುಮಕೂರಿನ ಹೊರವಲಯದ ಕೋರಾ ಎಂಬ ಗ್ರಾಮದಲ್ಲಿ ನಡೆದಿದೆ.
ಸರ್ಕಾರಿ ಶಾಲೆ ಎಂದರೆ ನಿರ್ಲಕ್ಯ ತೋರಿಸುವ ಜನರಿಗೆ ಈ ಶಾಲೆ ಮಾದರಿ ಶಾಲೆಯಾಗಿದೆ. ಇದು ಸರ್ಕಾರ ನಿರ್ಮಾಣ ಮಾಡಿದ ಶಾಲೆಯಲ್ಲ, ಬದಲಿಗೆ ತನ್ನ ತಾಯಿಗಾಗಿ ಉದ್ಯಮಿಯೊಬ್ಬರು ನಿರ್ಮಿಸಿದ ಕೊಡುಗೆ.
ಈ ಶಾಲೆ ನಿರ್ಮಿಸಿದ ಉದ್ಯಮಿಯ ಹೆಸರು ಹರ್ಷ, ಮತ್ತು ಮಮತ ದಂಪತಿ.ಇವರು ಬೆಂಗಳೂರಿನಲ್ಲಿ ಖಾಸಗಿ ಉದ್ಯಮ ನಡೆಸುತ್ತಿರುವಾಗ ಒಮ್ಮೆ ಕೋರಾ ಮಾರ್ಗವಾಗಿ ಶಿರಾಗೆ ತೆರಳುತ್ತಿದ್ದಾಗ ತಾಯಿಯ ಊರು ಎಂಬ ಅಭಿಮಾನದಿಂದ ಕಾರು ನಿಲ್ಲಿಸಿ ಇಳಿದಿದ್ದೇ ಈ ಮಹತ್ಕಾರ್ಯಕ್ಕೆ ಕಾರಣವಾಯಿತು.
ಊರ ಮೊಮ್ಮಗ ಹರ್ಷ ಈ ಊರಿಗೆ ಕಾಲಿಟ್ಟಾಗ ಹಳೇ ಶಾಲೆಯ ಭಾಗಶಃ ಕಟ್ಟಡವನ್ನು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಕೆಡವಲಾಗಿತ್ತು. ಇದನ್ನು ಗಮನಿಸಿದ ಹರ್ಷ ಅವರು ತಮ್ಮ ತಾಯಿಯ ನೆನಪಿಗಾಗಿ ಶಾಲೆಗೆ ಹೊಸ ಕಟ್ಟಡ ಕಟ್ಟಿಸಿ ಕೊಡಲು ಗ್ರಾಮದ ಮುಖಂಡರು ಹಾಗೂ ಅಧಿಕಾರಿಗಳನ್ನು ಸಂಪರ್ಕಿಸಿದ್ದು, ದೊಡ್ಡದಾದ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಸಾಕ್ಷಿಯಾಗಿದೆ.
ಈ ಶಾಲೆಯು 14 ಕೊಠಡಿಗಳ ಸುಸಜ್ಜಿತವಾದ ಕೊಠಡಿಗಳನ್ನು ಹೊಂದಿದೆ. ಶಾಲೆಯಲ್ಲಿ ಗಣಕಯಂತ್ರ ಕೊಠಡಿ, ಅಕ್ಷರ ದಾಸೋಹ ಕೊಠಡಿ, ಸ್ಮಾರ್ಟ್ ಕ್ಲಾಸ್ ಕೊಠಡಿ ಹೀಗೆ ಸಂಪೂರ್ಣ ಹೈಟೆಕ್ ಮಾದರಿಯಲ್ಲಿ ಸರ್ಕಾರಿ ಶಾಲೆಯನ್ನು ನಿರ್ಮಿಸಿಕೊಡಲಾಗಿದೆ.
ಈ ಶಾಲೆಯನ್ನು ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಸ್ಥಳೀಯ ಶಾಸಕ ಡಾ.ಜಿ.ಪರಮೇಶ್ವರ್ ಹಾಗೂ ಸಂಸದ ಬಸವರಾಜ್ ನೂತನ ಶಾಲಾ ಕಟ್ಟಡವನ್ನು ಉದ್ಘಾಟಿಸಿದ್ದಾರೆ. ಇದೇ ವೇಳೆ ಶಾಲಾ ಕಟ್ಟಡ ನಿರ್ಮಾಣದ ಮಹಾದಾನಿಗಳಾದ ಹರ್ಷ ಮತ್ತು ಮಮತಾ ದಂಪತಿಗೆ ಕೋರಾ ಗ್ರಾಮದ ರಾಜ ಬೀದಿಗಳಲ್ಲಿ ಪೂರ್ಣ ಕುಂಭ ಮತ್ತು ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಯ್ತು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy