ಲೋಕಸಭೆ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಟಿ ಕಂಗನಾ ರಣಾವತ್, ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಬದಲು ತಮ್ಮದೇ ಪಕ್ಷದ ತೇಜಸ್ವಿ ಸೂರ್ಯರನ್ನು ಟೀಕಿಸಿ ಪೇಚಿಗೆ ಸಿಲುಕಿದ್ದಾರೆ. ತೇಜಸ್ವಿ ಮತ್ತು ತೇಜಸ್ವಿ ಎಂಬ ಹೆಸರಿನಲ್ಲಿರುವ ಸಾಮ್ಯತೆಯಿಂದಾಗಿ ಕಂಗನಾ ರಣಾವತ್ ಈ ಯಡವಟ್ಟು ಮಾಡಿಕೊಂಡಿದ್ದಾರೆ.
“ಹಾಳಾದ ರಾಜಕುಮಾರರ ಪಕ್ಷವೊಂದಿದೆ… ಚಂದ್ರನ ಮೇಲೆ ಆಲೂಗಡ್ಡೆ ಬೆಳೆಯಲು ಬಯಸುವ ರಾಹುಲ್ ಗಾಂಧಿ ಇರಬಹುದು ಅಥವಾ ಗೂಂಡಾಗಿರಿ ಮಾಡುವ ಮತ್ತು ಮೀನು ತಿನ್ನುವ ತೇಜಸ್ವಿ ಸೂರ್ಯ ಇರಬಹುದು” ಎಂದು ಕಂಗನಾ ಹೇಳಿದ್ದಾರೆ. ವಾಸ್ತವವಾಗಿ ಆರ್ ಜೆಡಿ ನಾಯಕ ಮತ್ತು ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಕಂಗನಾ ವಾಗ್ದಾಳಿಯಲ್ಲಿ ಟಾರ್ಗೆಟ್ ಆಗಬೇಕಿತ್ತು. ತೇಜಸ್ವಿ ಯಾದವ್ ನವರಾತ್ರಿ ವೇಳೆ ಮೀನು ತಿನ್ನುತ್ತಿರುವ ವೀಡಿಯೋ ಇತ್ತೀಚೆಗೆ ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವೆ ಪ್ರಮುಖ ಸಂಘರ್ಷದ ವಿಷಯವಾಗಿ ಪರಿಣಮಿಸಿತ್ತು.
ಇದನ್ನೇ ಮುಂದಿಟ್ಟುಕೊಂಡು ಕಂಗನಾ ರಣಾವತ್ ಟೀಕಾಪ್ರಹಾರ ನಡೆಸಲು ಮುಂದಾಗಿದ್ದರು. ಆದರೆ ತೇಜಸ್ವಿ ಯಾದವ್ ಬದಲು, ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿರುವ ತಮ್ಮದೇ ಪಕ್ಷದ ಸಂಸದ ತೇಜಸ್ವಿ ಸೂರ್ಯ ಹೆಸರನ್ನು ಪ್ರಸ್ತಾಪಿಸುವ ಮೂಲಕ ಕಂಗನಾ ಮುಜುಗರಕ್ಕೆ ಒಳಗಾಗಿದ್ದಾರೆ. ಈ ಮಧ್ಯೆ, ಕಂಗನಾ ರಣಾವತ್ ಹೇಳಿಕೆಯ ವೀಡಿಯೋ ಹಂಚಿಕೊಂಡಿರುವ ತೇಜಸ್ವಿ ಯಾದವ್, “ಈ ಮಹಿಳೆ ಯಾರು?”, ಎಂದು ಅವರು ಎಕ್ಸ್ ಖಾತೆಯ ಪೋಸ್ಟ್ ನಲ್ಲಿ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296