ಪುಣೆ: ಪತ್ನಿಯ ಕಿರಿ ಕಿರಿ ಕೇಳಲಾಗದೇ ವ್ಯಕ್ತಿಯೊಬ್ಬ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಬಳಿಕ ಭಾರೀ ನೀರಿನ ಹರಿವು ಇದ್ದ ನದಿಯಲ್ಲಿ ವ್ಯಕ್ತಿ ಕೊನೆಗೂ ಪವಾಡದಂತೆ ಬದುಕಿ ಬಂದಿದ್ದಾನೆ.
ಮಹಾರಾಷ್ಟ್ರದ ಪುಣೆಯಲ್ಲಿ ಈ ಘಟನೆ ನಡೆದಿದೆ. ಪಿಂಪಿರಿ-ಚಿಂಚ್ವಾಡ ಮೂಲದ ಅಬಾಸಾಹೇಬ ಕೇಶವ ಪವಾರ್ ಎಂಬಾತನಿಗೆ ಪತ್ನಿ ಬೈದಿದ್ದು, ಪತ್ನಿಯ ಬೈಗಳಿಂದ ಬೇಸತ್ತು ವಾಲ್ಹೇಕರವಾಡಿ ಪ್ರದೇಶದ ಜಾದವ್ ಘಾಟ್‌ನಲ್ಲಿ ಪಾವನಾ ನದಿಗೆ ಹಾರಿದ್ದರು.
ಇದರಿಂದ ಆತಂಕಗೊಂಡ ಕುಟುಂಬಸ್ಥರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಚಿಂಚ್ವಾಡದ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ ಸ್ಥಳಕ್ಕೆ ಧಾವಿಸಿದ್ದಾರೆ. ನದಿಯಲ್ಲಿ ತೀವ್ರ ಹುಡುಕಾಟ ನಡೆಸಿದರೂ ಕೇಶವ್ ಪತ್ತೆಯಾಗಲಿಲ್ಲ, ನದಿ ದಡದಲ್ಲಿ ಗಿಡವೊಂದಕ್ಕೆ ಬಟ್ಟೆ ಸಿಕ್ಕಿಹಾಕಿ ಕೊಂಡಿರುವುದು ಪತ್ತೆಯಾಗಿತ್ತು. ಮರ ಪೊದೆ ಎಲ್ಲ ಕಡೆಯೂ ಹುಡುಕಾಟ ನಡೆಸಲಾಯಿತು.
ಅಣೆಕಟ್ಟಿನಿಂದ 4000 ಕ್ಯೂಸೆಕ್ ನೀರನ್ನು ಬಿಟ್ಟಿದ್ದರಿಂದ ನದಿಯಲ್ಲಿ ಹೆಚ್ಚಿನ ಹರಿವು ಇತ್ತು. ನದಿಗೆ ಹಾರಿದ ಪವಾರ್, ಉತ್ತಮ ಈಜುಪಟು ಆಗಿದ್ನಂತೆ. ಹೀಗಾಗಿ ಆತ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಲ್ಲಾದರೂ ಇರಬಹುದೆಂದು ಭಾವಿಸಿದ್ದರು.
ಆದರೆ ಕೇಶವ್ ಪವಾರ್ ನದಿಯ ಪ್ರವಾಹದಿಂದ ಹೇಗೋ ಪಾರಾಗಿ ನದಿಯ ದಡಕ್ಕೆ ಬಂದಿದ್ದ. ಕೊಂಬೆಯೊಂದನ್ನು ಹಿಡಿದುಕೊಂಡು ಆತ ನೇತಾಡುತ್ತಿದ್ದ ಎಂದು ಆತ ತಿಳಿಸಿದ್ದ. ಕೊನೆಗೂ ಆತನ ಪತ್ತೆಯಾಗಿದ್ದು, ಗಂಡ ಮರಳಿ ಸಿಕ್ಕಿದರಿಂದಾಗಿ ಪತ್ನಿ ಫುಲ್ ಖುಷ್ ಆಗಿದ್ದಾಳೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q