ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಯು ನಡೆಸಿದ ಮೂರು ದಿನಗಳ ಸುದೀರ್ಘ ಹಾಗೂ ವಿಶೇಷ ಕಾರ್ಯಾಚರಣೆಯಲ್ಲಿ ನಗರದ ಪ್ರಮುಖ 60 ತ್ರೀ–ಸ್ಟಾರ್ ಮತ್ತು ಫೈವ್-ಸ್ಟಾರ್ ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ವ್ಯಾಪಕ ತಪಾಸಣೆ ಕೈಗೊಳ್ಳಲಾಗಿದೆ. ಈ ತಪಾಸಣೆ ವೇಳೆ ಕೊಳೆತ ಮಾಂಸ, ಬೂಸ್ಟ್ ಹಿಡಿದ ತರಕಾರಿಗಳು, ಅವಧಿ ಮೀರಿದ ಆಹಾರ ಪದಾರ್ಥಗಳು ಹಾಗೂ ಪದೇ ಪದೇ ಬಳಸಿದ ಅಡುಗೆ ಎಣ್ಣೆ ಸೇರಿದಂತೆ ಹಲವು ಗಂಭೀರ ಸ್ವರೂಪದ ನಿಯಮ ಉಲ್ಲಂಘನೆಗಳು ಬೆಳಕಿಗೆ ಬಂದಿವೆ. ಅಷ್ಟೇ ಅಲ್ಲದೆ, ಒಂದು ವರ್ಷಕ್ಕೂ ಹೆಚ್ಚು ಕಾಲ ಅವಧಿ ಮುಗಿದಿರುವ ಮಾಂಸಾಹಾರ ಉತ್ಪನ್ನಗಳನ್ನು ಸಂಗ್ರಹಿಸಿಟ್ಟಿರುವುದು ಅಧಿಕಾರಿಗಳಿಗೆ ಕಂಡುಬಂದಿದೆ.
ಕಾರ್ಯಾಚರಣೆಯ ಭಾಗವಾಗಿ ಅಧಿಕಾರಿಗಳ ತಂಡವು ವಿವಿಧ ಹೋಟೆಲ್‌ಗಳು ಹಾಗೂ ಪ್ರಸಿದ್ಧ ಆಹಾರ ಮಳಿಗೆಗಳಿಂದ ಚಿಕನ್, ಮಾಂಸ, ಮೀನು, ಬ್ರೆಡ್, ಮೇಯನೇಸ್, ಅಡುಗೆ ಎಣ್ಣೆ, ಮೊಸರು, ಬೇಳೆ ಮತ್ತು ಚಟ್ನಿ ಸೇರಿದಂತೆ ಒಟ್ಟು 77 ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿದ್ದು, ಹೆಚ್ಚಿನ ಪರಿಶೀಲನೆಗಾಗಿ ಆಹಾರ ಪ್ರಯೋಗಾಲಯಗಳಿಗೆ ಕಳುಹಿಸಿಕೊಟ್ಟಿದೆ. ತಪಾಸಣೆಯ ಸಂದರ್ಭದಲ್ಲಿ FSSAI ನಿಯಮಾವಳಿಗಳಿಗೆ ಅನುಗುಣವಾಗಿರದ ಲೇಬಲಿಂಗ್, ಸಸ್ಯಾಹಾರಿ ಮತ್ತು ಮಾಂಸಾಹಾರಿ ಪದಾರ್ಥಗಳನ್ನು ಪ್ರತ್ಯೇಕವಾಗಿ ಇಡದಿರುವುದು, ಕೃತಕ ಬಣ್ಣಗಳ ಅಸಮರ್ಪಕ ಬಳಕೆ ಹಾಗೂ ಅಸ್ವಚ್ಛ ವಾತಾವರಣದಲ್ಲಿ ಆಹಾರ ತಯಾರಿಸುತ್ತಿರುವುದು ಪತ್ತೆಯಾಗಿದೆ. ಕೆಲವು ಉತ್ಪನ್ನಗಳ ಮೇಲೆ ಒಂದು ವರ್ಷದ ಶೆಲ್ಫ್ ಲೈಫ್ ಬದಲಿಗೆ ಎರಡು ವರ್ಷ ಎಂದು ನಮೂದಿಸಿ ಗ್ರಾಹಕರನ್ನು ವಂಚಿಸುತ್ತಿರುವುದು ಕಂಡುಬಂದಿದೆ.
ಈ ದಿಢೀರ್ ದಾಳಿಯ ವೇಳೆ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಬೃಹತ್ ಪ್ರಮಾಣದ ಅಸುರಕ್ಷಿತ ಆಹಾರ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ. ಸುಮಾರು 640 ಕೆಜಿ ಅವಧಿ ಮೀರಿದ ಹಾಗೂ ಸರಿಯಾದ ಲೇಬಲ್ ಇಲ್ಲದ ಮಾಂಸ, 276 ಕೆಜಿ ಕೊಳೆತ ಹಾಗೂ ಶಿಲೀಂಧ್ರ ಬಾಧಿತ ತರಕಾರಿಗಳು, 45 ಲೀಟರ್ ಅವಧಿ ಮೀರಿದ ಹಾಲು ಮತ್ತು ಮೊಸರು ಹಾಗೂ 12 ಕೆಜಿ ಬೇಕರಿ ಉತ್ಪನ್ನಗಳನ್ನು ಜಪ್ತಿ ಮಾಡಿ, ನಿಯಮಾವಳಿಗಳ ಪ್ರಕಾರ ತಕ್ಷಣವೇ ನಾಶಪಡಿಸಲಾಗಿದೆ.
ಸ್ಟಾರ್ ಹೋಟೆಲ್ ಗಳ ಜೊತೆಗೆ ಕೆಎಫ್ ಸಿ, ಮೆಕ್ ಡೊನಾಲ್ಡ್ಸ್ ಮತ್ತು ಸಬ್ ವೇಯಂತಹ ಅಂತಾರಾಷ್ಟ್ರೀಯ ಆಹಾರ ಸರಪಳಿ ಸಂಸ್ಥೆಗಳ ಮಳಿಗೆಗಳ ಮೇಲೆಯೂ ಇಲಾಖೆ ಕಣ್ಣಿಟ್ಟಿದೆ. ಬ್ರಿಗೇಡ್ ರಸ್ತೆಯಲ್ಲಿರುವ ಮೆಕ್ ಡೊನಾಲ್ಡ್ಸ್ ಮಳಿಗೆಯಲ್ಲಿ ಪರಿಶೀಲನೆ ನಡೆಸಿದಾಗ, ಒಮ್ಮೆ ಬಳಸಿದ ಫ್ರೈಯಿಂಗ್ ಎಣ್ಣೆಯನ್ನು ಶುದ್ಧೀಕರಿಸಲು ಮೆಗ್ನೀಸಿಯಂ ಸಲ್ಫೈಟ್ ರಾಸಾಯನಿಕ ಬಳಸುತ್ತಿರುವುದು ಕಂಡುಬಂದಿದೆ. ನಿಯಮ ಉಲ್ಲಂಘಿಸಿರುವ ಪ್ರತಿಯೊಂದು ಹೋಟೆಲ್ ಹಾಗೂ ಮಳಿಗೆಗಳಿಗೆ ಆಹಾರ ಸುರಕ್ಷತಾ ಕಾಯ್ದೆಯಡಿ ನೋಟಿಸ್ ಜಾರಿಗೊಳಿಸಲಾಗಿದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ಪ್ರಕರಣಗಳನ್ನು ನ್ಯಾಯನಿರ್ಣಯ ಅಧಿಕಾರಿಗಳ ಮುಂದೆ ದಾಖಲಿಸಲು ಶಿಫಾರಸು ಮಾಡಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
