ಬೆಂಗಳೂರು: ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ನಾಪತ್ತೆಯಾಗಿದ್ದ 12 ವರ್ಷದ ಬಾಲಕ ಪರಿಣವ್ ನನ್ನು ಪೊಲೀಸರು ಹೈದರಾಬಾದ್ ನ ನಾಂಪಲ್ಲಿ ಮೆಟ್ರೋ ನಿಲ್ದಾಣದಲ್ಲಿ ಪತ್ತೆ ಹಚ್ಚಿದ್ದಾರೆ. ಮಗನನ್ನು ಪತ್ತೆ ಹಚ್ಚಿದ ನಂತರ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ ಹಾಗೂ ಬಾಲಕ ಸುರಕ್ಷಿತವಾಗಿದ್ದಾನೆ ಎಂದು ತಿಳಿಸಿದ್ದಾರೆ.
ಟ್ಯೂಷನ್ ತರಗತಿ ಹೋಗಿದ್ದ ಬಾಲಕ ಪರಿಣವ್ ನಾಪತ್ತೆಯಾಗಿದ್ದ. ತಂದೆ ತಡವಾಗಿ ಟ್ಯೂಷನ್ ತರಗತಿ ನಡೆಯತ್ತಿದ್ದಲ್ಲಿಗೆ ಬಂದು ವಿಚಾರಿಸಿದಾಗ ಬಾಲಕ ಅಲ್ಲಿಂದ ಟ್ಯೂಷನ್ ಮುಗಿಸಿ ತೆರಳಿರುವುದು ಗೊತ್ತಾಗಿತ್ತು ಎನ್ನಲಾಗಿದೆ. ಅಂದಿನಿಂದ ಆತ ನಾಪತ್ತೆಯಾಗಿದ್ದ ಹಾಗೂ ಮಾರತ್ತಹಳ್ಳಿ, ಯಮಲೂರು ಮತ್ತು ಮೆಜೆಸ್ಟಿಕ್ ನಲ್ಲಿರುವ ವಿವಿಧ ಸಿಸಿಟಿವಿ ಕ್ಯಾಮೆರಾಗಳಲ್ಲಿ ಬಾಲಕನ ಚಲನವಲನಗಳು ಪತ್ತೆಯಾಗಿದ್ದವು.
ಹುಡುಗನ ಬಳಿ ಹಣವಿರಲಿಲ್ಲ. ಹಣಕ್ಕಾಗಿ ಆತ ವ್ಯಕ್ತಿಯೊಬ್ಬನಿಗೆ ತನ್ನ ಮಾರ್ಕರ್ ಪೆನ್ ಮಾರಾಟ ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವುದು ಕಂಡುಬಂದಿದೆ ಎಂದು ಪರಿಣವ್ ತಂದೆ ಸುಕೇಶ್ ತಿಳಿಸಿದ್ದಾರೆ.
ಪರಿಣವ್ ಭಾನುವಾರ ಮಧ್ಯಾಹ್ನ 12.15ರ ಸುಮಾರಿಗೆ ನಾಪತ್ತೆ ಆಗಿದ್ದ. ಆತ ಟ್ಯೂಷನ್ ಸೆಂಟರ್ ನಿಂದ ಮಾರತ್ತಹಳ್ಳಿವರೆಗೆ ನಡೆದು ಬಂದಿದ್ದು, ನಂತರ ಬಿಎಂಟಿಸಿ ಬಸ್ ಹತ್ತಿರುವ ಸಿಸಿಕ್ಯಾಮರಾ ದೃಶ್ಯ ಲಭ್ಯವಾಗಿತ್ತು. ಈ ಸಂಬಂಧ ವೈಟ್ಫೀಲ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಕ್ಷಣವೇ ಪೊಲೀಸರು ಕಾರ್ಯಪ್ರವೃತ್ತರಾಗಿದ್ದರು. ಇದೀಗ ಪೊಲೀಸರು ಬಾಲಕನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.


