ಅಂತರಸಂತೆ: ವಿಶಾಲವಾದ ಸ್ಥಳಾವಕಾಶವಿದ್ದರೂ ಸರಿಯಾದ ನಿರ್ವಹಣೆಯ ಕೊರತೆಯಿಂದಾಗಿ ಇದೀಗ ಕೆರೆಯೊಂದು ನೀರಿನ ಬದಲು ತ್ಯಾಜ್ಯಗಳಿಂದಲೇ ತುಂಬುವ ಹಂತವನ್ನು ತಲುಪಿದ್ದು, ಗ್ರಾಮದ ಕೆರೆಯನ್ನು ರಕ್ಷಣೆ ಮಾಡಬೇಕು ಎಂಬ ಕೂಗು ಅಂತರಸಂತೆ ಗ್ರಾಮಸ್ಥರಿಂದ ಕೇಳಿಬಂದಿದೆ.
ಹೌದು, ಹೆಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಗ್ರಾಮದಲ್ಲಿನ ಮುಖ್ಯ ಕೆರೆ ಇದೀಗ ನಿರ್ವಹಣೆಯ ಸಮಸ್ಯೆಯಿಂದಾಗಿ ಪ್ಲಾಸ್ಟಿಕ್ ಮಯವಾಗುವ ಜೊತೆಗೆ ಅನೈತಿಕ ಚಟುವಟಿಕೆಯ ತಾಣವಾಗಿ ಬದಲಾಗುತ್ತಿದ್ದು, ಕೆರೆಯ ಸುತ್ತಲು ತ್ಯಾಜ್ಯ ಸಂಗ್ರಹವಾಗುತ್ತಿದೆ. ಮೈಸೂರು ಮಾನಂದವಾಡಿ ಮುಖ್ಯರಸ್ತೆಯ ಬದಿಯಲ್ಲಿ ಈ ಕೆರೆಯಿದ್ದು, ಅಂತರಸಂತೆ ಸೇರಿದಂತೆ ನೂರಲಕುಪ್ಪೆ, ನೂರಲಕುಪ್ಪೆ ಬಿ. ಗ್ರಾಮಗಳ ಕೃಷಿ ಮತ್ತು ದನಕರುಗಳಿಗೆ ನೀರಿನ ಮೂಲವಾಗಿದೆ. ಸಧ್ಯ ಈ ಕೆರೆಯನ್ನು ಸ್ವಚ್ಛಗೊಳಿಸಿ ಸ್ಥಳೀಯ ಜಾನುವಾರುಗಳಿಗೆ ನೀರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
ಸಮರ್ಪಕ ದಾರಿ ಇಲ್ಲ: ಇನ್ನೂ ಕೆರೆಯ ಸುತ್ತಲು ಸಂಪೂರ್ಣ ಲಾಂಟನಾದಂತಹ ಕಳೆ ಸಸ್ಯಗಳು ಹೆಚ್ಚಾಗಿ ಬೆಳೆದುಕೊಂಡಿವೆ. ಇದರಿಂದಾಗಿ ಕೆರೆಯ ಅಂಗಳದಲ್ಲಿ ದನಕರುಗಳಿಗೆ ಸರಿಯಾದ ಮೇವು ಸಹ ಸಿಗದಂತಾಗಿದೆ. ಅಲ್ಲದೇ ಕೆರೆಗೆ ಹೋಗಲು ಇದ್ದ ಮಾರ್ಗಗಳ ಪೈಕಿ ಸಾಕಷ್ಟು ಮಾರ್ಗಗಳು ಈಗಾಗಲೇ ಗಿಡಗಂಟೆಗಳಿಂದ ಮುಚ್ಚಿ ಹೋಗಿದ್ದು, ಕಾಲುದಾರಿಗಳನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದೆ. ಗ್ರಾಮದ ಮುಖ್ಯದ್ವಾರದ ಮತ್ತು ಗ್ರಾಮ ಪಂಚಾಯಿತಿಯ ಎದುರು ಭಾಗದಲ್ಲಿ ಕೆರೆಗೆ ಮುಖ್ಯ ಮಾರ್ಗವಿದ್ದು, ಅದು ಸಂಪೂರ್ಣ ಮುಚ್ಚಿ ಹೋಗಿ ಸಾಕಷ್ಟು ತಿಂಗಳುಗಳೇ ಕಳೆದರು ತೆರವು ಮಾಡಿ ಸಮರ್ಪಕ ರಸ್ತೆ ನಿರ್ಮಾಣ ಮಾಡದೇ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಮದ್ಯವ್ಯಸನಿಗಳ ತಾಣವಾಗಿರುವ ಕೆರೆ: ಇದರೊಂದಿಗೆ ಕೆರೆಯ ಆವರಣದಲ್ಲಿ ಮದ್ಯವ್ಯಸನಿಗಳ ಆವಳಿ ಹೆಚ್ಚಾಗ ತೊಡಗಿದ್ದು, ಕೆರೆಯ ಅಂಗದಲ್ಲಿ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ಬಾಟಲಿಗಳು, ಕವರ್ ಗಳು ಸೇರುವಂತಾಗಿದೆ. ಅಲ್ಲದೇ ಅಲ್ಲಲ್ಲಿ ಇಸ್ಪಿಟ್ ಕಾರ್ಡ್‍ಗಳು ಸಹ ಕೆರೆಯ ಅಂಗಳದಲ್ಲಿ ಹರಡಿದ್ದು, ಸಮೀಪದಲ್ಲಿ ಜೂಜು ಅಡ್ಡೆಗಳು ಹೆಚ್ಚಾಗಿರುವ ಅನುಮಾನಗಳು ಉಂಟಾಗುವಂತೆ ಮಾಡಿದೆ.
ಸ್ವಚ್ಛತೆಯಿಂದ ದೂರ ಉಳಿದಿರುವ ಕೆರೆ: ಇನ್ನೂ ಕೆರೆಯನ್ನು ಜನರು ಮೈಸೂರು ಮಾನಂದವಾಡಿ ಮಾರ್ಗವಾಗಿ ಓಡಾಡುವ ಪ್ರಯಾಣಿಕರು ಮಲ ಮೂರ್ತ ವಿಸರ್ಜನೆ ಮಾಡವ ಸ್ಥಳವನ್ನಾಗಿ ಮಾಡಿಕೊಂಡಿದ್ದಾರೆ. ಇದರಿಂದ ಕೆರೆ ಸಂಪೂರ್ಣ ಮಾಲಿನ್ಯವಾಗಿದ್ದು, ಇದಕ್ಕೆ ಕಡಿವಾಣ ಹಾಕಿ ಕೆರೆಯೂ ಸ್ವಚ್ಛತೆಯಿಂದಿರುವಂತೆ ನೋಡಿಕೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
ಈ ಬಾರಿ ಉತ್ತಮ ಮಳೆಯಾಗಿದ್ದು, ಕೆರೆ ಸಂಪೂರ್ಣ ತುಂಬವ ಅವಕಾಶವಿತ್ತು. ಆದರೆ ಕೆರೆಯಲ್ಲಿ ಗಿಡಗಂಟಿಗಳು ಹೆಚ್ಚಾಗಿರುವ ಕಾರಣ ಕೆರೆ ತುಂಬಲು ಸಾಧ್ಯವಾಗಿಲ್ಲ. ಇದರೊಂದಿಗೆ ಕೆರೆಯೂ ಒತ್ತುವರಿಯಾಗಿದೆ ಎಂಬ ಆರೋಪವು ಸಹ ಹೆಚ್ಚಾಗಿ ಕೇಳಿ ಬಂದಿದ್ದು, ಸಂಬಂಧಪಟ್ಟವರು ಅದನ್ನು ತೆರವು ಮಾಡಿ ಕೆರೆಯನ್ನು ಸ್ವಚ್ಛಗೊಳಿಸಿ ಉತ್ತಮ ವಾಯುವಿಹಾರದ ತಾಣವಾಗಿ ಮಾಡಬೇಕು ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ.
“ಸುತ್ತಲಿನ ಗ್ರಾಮಗಳ ನೀರಿನ ಮೂಲ ನಮ್ಮ ಅಂತರಸಂತೆಯ ಕೆರೆಯಾಗಿದೆ. ಸದ್ಯ ಈ ಕೆರೆ ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯದಿಂದಾಗಿ ಅನೈರ್ಮಲ್ಯವಾಗುವ ಜೊತೆಗೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆ ಕೆರೆಯನ್ನು ಕಾಪಾಡುವಲ್ಲಿ ಗಮನ ನೀಡಬೇಕು.”
-ಮಹೇಶ್, ಅಂತರಸಂತೆ, ಗ್ರಾಮಸ್ಥ
“ಕೆರೆಯೂ ಒತ್ತುವರಿಯಾಗಿದೆ ಎಂದು ದೂರು ನೀಡಿದಂತ ಸಂದರ್ಭದಲ್ಲಿ ಅಳತೆ ಮಾಡಲು ಬಂದಿದ್ದರು. ಆದರೆ ಸಂಪೂರ್ಣ ಅಳತೆ ಮಾಡಲಿಲ್ಲ. ಈ ಬಗ್ಗೆ ನಾವು ಸಾಕಷ್ಟು ದೂರು ನೀಡಿದ್ದೇವೆ. ಸಂಪೂರ್ಣ ಅಳತೆ ಮಾಡಿ ಕೆರೆಗೆ ಸೂಕ್ತ ದಾರಿಗಳನ್ನು ಮಾಡಿ ವಾಯುವಿಹಾರಕ್ಕೆ ಅವಕಾಶ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡಲಾಗುವುದು.”
-ಬುದ್ಧ ಪ್ರಕಾಶ್, ಭೀಮ್ ಆರ್ಮಿ ಸಂಘಟನೆಯ ಅಧ್ಯಕ್ಷ, ಅಂತರಸಂತೆ
“ಜನವರಿ ಕಳೆದ ನಂತರ ಕೆರೆಯ ಸ್ವಚ್ಛತೆ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಧರ್ಮಸ್ಥಳ ಗ್ರಾಮಭಿವೃದ್ಧಿ ಸಂಘ ಮತ್ತು ಗ್ರಾಮದ ಮುಖಂಡರನ್ನು ಒಳಗೊಂಡಂತೆ ಸಮಿತಿ ರಚಿಸಿ ಕೆರೆಯನ್ನು ಸ್ವಚ್ಛಗೊಳಿಸಲಾಗುವುದು. ಇನ್ನೂ ಕೆರೆಯಲ್ಲಿ ಮಧ್ಯವ್ಯಸನಿಗಳು ಮತ್ತು ಜೂಜುಕಾರರ ಹಾವಳಿ ತಪ್ಪಿಸಲು ಪೊಲೀಸ್ ಇಲಾಖೆಯ ನೆರವು ಪಡೆಯಲಾಗುವುದು.”
-ಆರ್.ಕೆ.ಚಿದಾನಂದಸ್ವಾಮಿ, ಪಿಡಿಒ, ಅಂತರಸಂತೆ
ಜನವರಿ ಕಳೆದ ನಂತರ ಸ್ವಚ್ಛತೆಗೆ ಸಿದ್ಧವಾಗಿದೆ. ಮೊದಲು ಕೆರೆಯ ಸಚ್ಛತೆಯ ಕಡೆ ಹೆಚ್ಚಿನ ಗಮನ ನೀಡಲಾಗುವುದು. ಆನಂತರ ಕೆರೆಯ ಉಳಿದ ವಿಚಾರಗಳನ್ನು ಬಗೆಹರಿಸಿ ಅಭಿವೃದ್ಧಿ ಮಾಡಲಾಗುವುದು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸಹಕಾರದೊಂದಿಗೆ ಅಭಿವೃದ್ಧಿ ಕೆಲಸ ಆರಂಭಗೊಳ್ಳಲಿದೆ.
-ಕಲೀಂಪಾಷ, ಅಧ್ಯಕ್ಷರು, ಅಂತರಸಂತೆ ಗ್ರಾಪಂ