ಬೆಂಗಳೂರು: ಉಡುಗೊರೆ ಕಳುಹಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ 45.31 ಲಕ್ಷ ರೂಪಾಯಿಗಳನ್ನು ವಂಚಿಸಿರುವ ಘಟನೆ ನಡೆದಿದ್ದು, ಇದೀಗ ಘಟನೆ ಸಂಬಂಧ ವರ್ತೂರು ನಿವಾಸಿ ಮಹಿಳೆ ವೈಟ್‌ಫೀಲ್ಡ್ ವಿಭಾಗದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.
ಇನ್ ಸ್ಟಾಗ್ರಾಮ್ ಆ್ಯಪ್ ನಲ್ಲಿ ಸಂತ್ರಸ್ತ ಮಹಿಳೆ ಖಾತೆ ಹೊಂದಿದ್ದು, ಈ ಖಾತೆಗೆ ರಿಕ್ವೆಸ್ಟ್ ಕಳುಹಿಸಿದ್ದ ಆರೋಪಿ ಅಲೆಕ್ಸ್ ಎರಿನ್, ತಾನೊಬ್ಬ ಅಂತರರಾಷ್ಟ್ರೀಯ ಹಡಗಿನ ಕ್ಯಾಪ್ಟನ್ ಎಂಬುದಾಗಿ ಪರಿಚಯಿಸಿಕೊಂಡಿದ್ದ. ನಂತರ, ಇಬ್ಬರೂ ಪರಸ್ಪರ ಚಾಟಿಂಗ್ ಮಾಡಲಾರಂಭಿಸಿದ್ದರು. ಇನ್ನೂ ನಮ್ಮ ಸ್ನೇಹದ ನೆನಪಿಗಾಗಿ ಉಡುಗೊರೆ ಕಳುಹಿಸುವುದಾಗಿ ಹೇಳಿದ್ದ ಆರೋಪಿ, ಅದನ್ನು ಸ್ವೀಕರಿಸುವಂತೆ ಕೋರಿದ್ದ. ಅದಕ್ಕೆ ಮಹಿಳೆ ಒಪ್ಪಿಗೆ ಸೂಚಿಸಿದ್ದರು ಎನ್ನಲಾಗಿದೆ.
ಸೆ.30ರಂದು ಮಹಿಳೆಗೆ ಕರೆ ಮಾಡಿದ್ದ ಮತ್ತೊಬ್ಬ ಆರೋಪಿ, ದೆಹಲಿ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಯೆಂದು ಪರಿಚಯಿಸಿಕೊಂಡಿದ್ದು, ವಿದೇಶದಿಂದ ಬೆಲೆಬಾಳುವ ಡೈಮಂಡ್ ಉಡುಗೊರೆ ಬಂದಿರುವುದಾಗಿ ಹೇಳಿದ್ದಾನೆ. ಜೊತೆಗೆ ಕೆಲ ಶುಲ್ಕ ಪಾವತಿಸುವಂತೆ ಹೇಳಿದ್ದ. ಶುಲ್ಕ ತುಂಬದಿದ್ದರೆ, ಜೈಲು ಶಿಕ್ಷೆಯಾಗುವುದಾಗಿಯೂ ಎಚ್ಚರಿಕೆ ನೀಡಿದ್ದ ಎನ್ನಲಾಗಿದೆ.
ಆರೋಪಿಗಳ ಮಾತು ನಂಬಿದ ಮಹಿಳೆ ಆತ ಹೇಳಿದ್ದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ 45.31 ಲಕ್ಷ ರೂಪಾಯಿ ಪಾವತಿಸಿದ್ದರು. ಆದರೆ, ಆ ಬಳಿಕ ಯಾವುದೇ ಉಡುಗೊರೆ ಬಂದಿರಲಿಲ್ಲ. ಆರೋಪಿಗಳಿಗೆ ಕರೆ ಮಾಡಿದಾಗ ಅವರ ಫೋನ್ ಸ್ವಿಚ್ ಆಫ್ ಆಗಿದ್ದು, ಈ ವೇಳೆ ತಾನು ಮೋಸ ಹೋಗಿರುವುದು ಮಹಿಳೆಗೆ ತಿಳಿದು ಬಂದಿದೆ.
ಮಹಿಳೆಯ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಾಂತ್ರಿಕ ಪುರಾವೆಗಳನ್ನು ಸಂಗ್ರಹಿಸಿ ಆರೋಪಿಗಳ ವಿಳಾಸ ಪತ್ತೆಗೆ ಮುಂದಾಗಿದ್ದಾರೆ. ಆರೋಪಿಗಳಾದ ಅಲೆಕ್ಸ್ ಎರಿಕ್, ವೀರ್ ಪಾಲ್, ಬೆನ್ ಹಾಗೂ ಮಥುರಾ ಅನಿವರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನೂ ಆರೋಪಿಗಳು ಸುಳ್ಳು ಹೆಸರಿನಲ್ಲಿ ಪರಿಚಯಿಸಿಕೊಂಡಿರುವುದು ಕೂಡ ತಿಳಿದು ಬಂದಿದೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700